ಉಡುಪಿ: ಮೋಕ್ಷ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಭಾಸ್ಕರ್ ನಾಯ್ಕ್ ರಚಿಸಿ ನಿರ್ದೇಶಿಸಿ, ನಿರ್ಮಿಸಿರುವ, ಕರಾವಳಿ ಭಾಗದ ಕಥಾಹಂದರ ಹೊಂದಿರುವ ಕುದ್ರು ಚಿತ್ರ ಅಕ್ಟೋಬರ್ 13 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಭಾಸ್ಕರ್ ನಾಯ್ಕ್ ಅವರು, ಉಡುಪಿ, ಮಲೆನಾಡು, ಗೋವಾ ಹಾಗೂ ಆಯಿಲ್ ರಿಗ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಜನಪ್ರಿಯವಾಗಿದೆ ಎಂದರು.
ಈ ಚಿತ್ರದಲ್ಲಿ ನಾಯಕ ನಟನಾಗಿ ಹರ್ಷಿತ್ ಶೆಟ್ಟಿ ಹಾಗೂ ಇತರೆ ಪಾತ್ರವರ್ಗದಲ್ಲಿ ಗಾಡ್ವಿನ್, ಪ್ರಿಯಾ ಹೆಗ್ಡೆ, ಡಯಾನಾ ಡಿಸೋಜ, ನಟ ಫರ್ಹಾನ್, ಮಂಗಳೂರಿನ ನಮಿತಾ, ಪ್ರವೀಣ್ ಬಂಗೇರ, ಕಾಂತಾರ ಸತೀಶ್ ಆಚಾರ್ಯ ನಟಿಸಿದ್ದಾರೆ.
ಉಡುಪಿ ಪ್ರಜ್ವಲ್, ಪ್ರತೀಕ್ ಕುಂದು ಸಂಗೀತ ನಿರ್ದೇಶನ ಹಾಗೂ ಪುರಾಣಿಕ್, ಪ್ರದೀಪ್ ಛಾಯಾಗ್ರಹಣ ಚಿತ್ರಕ್ಕಿದೆ. ಶ್ರೀನಿವಾಸ್ ಕಲಾಲ್ ಅವರ ಸಂಕಲನವಿರುವ ಈ ಚಿತ್ರಕ್ಕೆ ಉಡುಪಿ ಕೃಷ್ಣ ಆಚಾರ್ ಸಂಭಾಷಣೆ ಬರೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪ್ರಿಯಾ ಹೆಗ್ಡೆ, ಫರ್ಹಾನ್, ಡಯಾನಾ ಡಿಸೋಜ, ಪ್ರವೀಣ್ ಬಂಗೇರ ಉಪಸ್ಥಿತರಿದ್ದರು.