ಒಳಮೀಸಲಾತಿಗೆ ಆಯೋಗ ರಚನೆ: ವಿಳಂಬ ನೀತಿ ಅಲ್ಲ: ಸಿಎಂ ಸಿದ್ದರಾಮಯ್ಯ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು,ಅಕ್ಟೋಬರ್ ,31,2024 (www.justkannada.in): ಒಳ ಮೀಸಲಾತಿ ಜಾರಿ ಸಂಬಂಧ ಸರ್ಕಾರ ಆಯೋಗ ರಚಿಸಿದ್ದು, ಇದರಲ್ಲಿ ಯಾವುದೇ ವಿಳಂಬ ನೀತಿ ಅಥವಾ ಕಾಲಹರಣ ತಂತ್ರ ಇರುವುದಿಲ್ಲ  ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಒಳ ಮೀಸಲಾತಿ ಕುರಿತು 3 ದಶಕಗಳ ನಿರಂತರ ಬೇಡಿಕೆ, ಒತ್ತಾಯಗಳ  ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟವು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಲು ತಾತ್ವಿಕವಾಗಿ ಒಪ್ಪಿಗೆ ನೀಡಿದೆ. ಪರಿಶಿಷ್ಟ ಜಾತಿಗಳಲ್ಲಿ 101 ಒಳ ಪಂಗಡಗಳಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವೈಜ್ಞಾನಿಕವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್‌ ನ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕಮಿಷನ್‌ ಆಫ್‌ ಇನ್‌ಕ್ವೈರಿ ಅಕ್ಟ್‌ 1952 ಅನ್ವಯ ಆಯೋಗವನ್ನು ರಚಿಸಲು ನಿರ್ಧರಿಸಲಾಗಿದೆ. ಸದರಿ ಆಯೋಗವು ಎರಡು ತಿಂಗಳ ಒಳಗಾಗಿ ವರದಿ ಸಲ್ಲಿಸುವ ಷರತ್ತು ವಿಧಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.  ಮುಂದಿನ ತೀರ್ಮಾನದವರೆಗೆ ರಾಜ್ಯ ಸರ್ಕಾರದ ಅಧೀನದ ಸಿವಿಲ್‌ ಸೇವೆಗಳಲ್ಲಿನ ಹಾಗೂ ಮೀಸಲಾತಿ ಅನ್ವಯವಾಗುವ ವೃಂದಗಳ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ಹೊರಡಿಸದಿರುವ ನಿರ್ಧಾರವನ್ನು ಸಹ ಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ತೆಲಂಗಾಣ ಸರ್ಕಾರ ಸಹ ಒಳ ಮೀಸಲಾತಿ ಜಾರಿ ಸಂಬಂಧ ಈಗಾಗಲೇ ಇದೇ ಮಾದರಿಯಲ್ಲಿ ಒಂದು ಆಯೋಗ ರಚನೆ ಮಾಡಿದೆ. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಒಳ ಮೀಸಲಾತಿಯನ್ನು ವೈಜ್ಞಾನಿಕವಾಗಿ, ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸೂಕ್ತ ಅಂಕಿ ಅಂಶಗಳ ಅಗತ್ಯವಿರುತ್ತದೆ. ಈ ಅಂಕಿ ಅಂಶಗಳನ್ನು ವೈಜ್ಞಾನಿಕವಾಗಿ ನಿರ್ಧರಿಸಲು  ರಾಜ್ಯ ಸರ್ಕಾರವು ಆಯೋಗವನ್ನು ರಚನೆ ಮಾಡಲು ನಿರ್ಧರಿಸಿದೆ. ಆಯೋಗವು ನಿಗಧಿತ ಗಡುವಿನೊಳಗೆ ವರದಿಯನ್ನು ಸಲ್ಲಿಸಲು ಬೇಕಾದ ಅಗತ್ಯ ಕ್ರಮಗಳನ್ನು ಸರ್ಕಾರವು ತೆಗೆದುಕೊಳ್ಳಲಿದೆ.  ಆಯೋಗದ ವರದಿ ಬಂದ ತಕ್ಷಣ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಕ್ರಮವಹಿಸಲಾಗುವುದು.

ಒಳ ಮೀಸಲಾತಿ ನೀಡುವುದು ಸಂವಿಧಾನ ಬದ್ಧವಾದ ಕ್ರಮ ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವ ಕ್ರಾಂತಿಕಾರಿ ನಿರ್ಣಯ ಕೈಗೊಂಡಿದೆ. ಸಮರ್ಪಕವಾಗಿ, ವೈಜ್ಞಾನಿಕವಾಗಿ ಹಾಗೂ ವಿವಾದಗಳಿಗೆ ಆಸ್ಪದ ನೀಡದಂತೆ ಒಳ ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕೆಂಬ ಉದ್ದೇಶದಿಂದ ಸರ್ಕಾರ ಆಯೋಗ ರಚಿಸಿದ್ದು, ಇದರಲ್ಲಿ ಯಾವುದೇ ವಿಳಂಬ ನೀತಿ ಅಥವಾ ಕಾಲಹರಣ ತಂತ್ರ ಇರುವುದಿಲ್ಲ.  ಸಾಮಾಜಿಕ ನ್ಯಾಯದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಕಾರ್ಯ ನಿರ್ವಹಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

Key words: Formation, commission, internal reservation, CM Siddaramaiah

Font Awesome Icons

Leave a Reply

Your email address will not be published. Required fields are marked *