ಮುಂಬೈ: ಮಹಾದೇವ್ ಆನ್ ಲೈನ್ ಬೆಟ್ಟಿಂಗ್ ಅಪ್ಲಿಕೇಷನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಟೈಗರ್ ಶ್ರಾಫ್, ಸನ್ನಿ ಲಿಯೋನ್ ಸೇರಿದಂತೆ ಬಾಲಿವುಡ್ ನ ಹಲವು ನಟ, ನಟಿಯರ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ ಎಂದು ಹೇಳಲಾಗಿದೆ.
ಮಹಾದೇವ್ ಆನ್ ಲೈನ್ ಬುಕ್ ಬೆಟ್ಟಿಂಗ್ ಆ್ಯಪ್ ಗೆ ಸಂಬಂಧಿಸಿ ಕೋಲ್ಕತ್ತ, ಭೋಪಾಲ್ ಹಾಗೂ ಮುಂಬೈನ 39 ಸ್ಥಳಗಳಲ್ಲಿ ಇಡಿ ಇಂದು (ಸೆ.15) ದಾಳಿ ನಡೆಸಿದ್ದು, ಸುಮಾರು 417 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದೆ.
ಈ ಸಂಸ್ಥೆ ಮಾಲೀಕ ಸೌರಭ್ ಚಂದ್ರಕರ್ ವಿವಾಹ ದುಬೈನಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಅದ್ದೂರಿಯಾಗಿ ನಡೆದಿತ್ತು. 200 ಕೋಟಿ ರೂ. ವೆಚ್ಚದ ಈ ಐಷಾರಾಮಿ ಮದುವೆಯಲ್ಲಿ ಟೈಗರ್ ಶ್ರಾಫ್, ಸನ್ನಿ ಲಿಯೋನ್, ಕೃತಿ ಕರಬಂಧ, ನುಸ್ರತ್ ಬರೂಚಾ, ಭಾಗ್ಯಶ್ರೀ, ಕಮಿಡಿಯನ್ಗಳಾದ ಕೃಷ್ಣ ಅಭಿಷೇಕ್, ಭಾರತಿ, ಗಾಯಕರಾದ ನೇಹಾ ಕಕ್ಕಡ್, ಅತಿಫ್ ಅಸ್ಲಂ, ರಾಹತ್ ಫತೇ ಅಲಿ ಖಾನ್, ವಿಶಾಲ್ ದದ್ಲಾನಿ, ಅಲಿ ಅಸ್ಗರ್ ಸೇರಿದಂತೆ ಒಟ್ಟು 14 ಬಾಲಿವುಡ್ ನಟ-ನಟಿಯರು ಹಾಗೂ ಗಾಯಕ-ಗಾಯಕಿಯರು ಪಾಲ್ಗೊಂಡಿದ್ದರು.
ಈ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಸೆಲೆಬ್ರಿಟಿಗಳು ಹವಾಲಾ ಹಣ ಸ್ವೀಕರಿಸಿದ್ದಾರೆ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ ಎಂದು ಇಡಿ ತಿಳಿಸಿದೆ.