ಮುಂಬೈ: ಇಂದು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು 81 ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಪ್ರತಿ ಭಾನುವಾರ ಅಮಿತಾಭ್ ತಮ್ಮ ನಿವಾಸದ ಹೊರಗೆ ಅಭಿಮಾನಿಗಳನ್ನು ಭೇಟಿ ಮಾಡುವ ಅಭ್ಯಾಸವನ್ನು ಹಲವು ವರ್ಷಗಳಿಂದ ಇಟ್ಟುಕೊಂಡಿದ್ದಾರೆ. ಆದರೆ ಇಂದು (ಅ.11)ರಂದು ಅಪಾರ ಸಂಖ್ಯೆಯ ಅಭಿಮಾನಿಗಳು ಅವರ ನಿವಾಸದತ್ತ ಬಂದಿದ್ದರು. ಹುಟ್ಟುಹಬ್ಬದ ದಿನ ಮಧ್ಯರಾತ್ರಿ ಅವರು ತಮ್ಮ ಮನೆಯ ಹೊರಬಂದು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳತ್ತ ಕೈಬೀಸಿ ನಕ್ಕು ಧನ್ಯವಾದ ಹೇಳಿದರು.
ಮುಂಬೈನ ತಮ್ಮ ನಿವಾಸ ಜಲ್ಸಾದ ಹೊರಗೆ ಸೇರಿದ್ದ ಸಾವಿರಾರು ಅಭಿಮಾನಿಗಳಿಗೆ ದರ್ಶನ ನೀಡಿದರು ಅಮಿತಾಭ್. ಈ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವೀಡಿಯೊದಲ್ಲಿ, ಸೂಪರ್ಸ್ಟಾರ್, ಸ್ಟೂಲ್ನ ಮೇಲೆ ನಿಂತಿದ್ದು, ತಮ್ಮ ಅಭಿಮಾನಿಗಳನ್ನು ಕೈ ಜೋಡಿಸಿ ಸ್ವಾಗತಿಸುವುದನ್ನು ಕಾಣಬಹುದು, ಅವರತ್ತ ಕೈ ಬೀಸುತ್ತಾ ನಗುತ್ತಿದ್ದಾರೆ. ಮನೆಯಿಂದ ಹೊರಗೆ ಬಂದ ತಕ್ಷಣ ಅಭಿಮಾನಿಗಳು ಜೈಕಾರ ಕೂಗಿ ಸ್ವಾಗತಿಸುತ್ತಾರೆ.
ಈ ವಿಡಿಯೊದ ಹಿನ್ನಲೆಯಲ್ಲಿ ಐಶ್ವರ್ಯಾ ರೈ ಬಚ್ಚನ್, ಮೊಮ್ಮಗಳು ನವ್ಯಾ ನವೇಲಿ ಮತ್ತು ಆರಾಧ್ಯ ತಮ್ಮ ತಮ್ಮ ಫೋನ್ಗಳಲ್ಲಿ ತಾತನ ಜನ್ಮದಿನದ ಸುಂದರ ಕ್ಷಣಗಳ ಚಿತ್ರಗಳನ್ನು ತೆಗೆದುಕೊಳ್ಳುವುದನ್ನು ನೋಡಬಹುದು.