ವಕೀಲರಿಗೆ ನಿಂದನೆ: ಎಸ್ ಐಗೆ ಜೈಲು ಶಿಕ್ಷೆ ವಿಧಿಸಿ ಶಿಕ್ಷೆ ಅಮಾನತ್ತಿನಲ್ಲಿಟ್ಟ ಕೋರ್ಟ್ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಕೇರಳ, ಸೆಪ್ಟಂಬರ್,5,2024 (www.justkannada.in):  ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಎಲ್ಲಿಲ್ಲದ ಗೌರವವಿದೆ. ಈ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಮೂರ್ತಿಗಳು, ವಕೀಲರ ಪಾತ್ರ ಬಹಳ ಮುಖ್ಯವಾದ್ದದ್ದು. ಹೀಗಾಗಿ ಈ ಹುದ್ದೆಗಳಿಗೆ ಜನತೆ ಗೌರವಿಸುತ್ತಾರೆ. ಆದರೆ ಕಾನೂನು ವೃತ್ತಿಪರರನ್ನು ಅಗೌರವಿಸುವ ವಾತಾವರಣವೂ ಕೆಲ ಸಂದರ್ಭದಲ್ಲಿ ನಿರ್ಮಾಣವಾಗುತ್ತದೆ.ಅಂತೆಯೇ ವಕೀಲರೊಬ್ಬರಿಗೆ ನಿಂದಿಸಿ ಅಗೌರವ ತೋರಿದ ಪೊಲೀಸ್ ಅಧಿಕಾರಿಗೆ ನ್ಯಾಯಾಂಗ ನಿಂದನೆ ಆರೋಪದಡಿ ಕೇರಳ ಹೈಕೋರ್ಟ್ ಎರಡು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ.

ಕೇರಳ ಹೈಕೋರ್ಟ್ ನ್ಯಾ. ದೇವನ್ ರಾಮಚಂದ್ರನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ಅಲತ್ತೂರು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವಿ.ಆರ್. ರಿನೀಶ್ ಅವರು ಶಿಕ್ಷೆಗೆ ಗುರಿಯಾಗಿದ್ದಾರೆ.

ಕಾನೂನು ವೃತ್ತಿಪರರನ್ನು ಅಗೌರವಿಸುವ ಪರಿಣಾಮಗಳ ಬಗ್ಗೆ ಕೇರಳ ಹೈಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ. ಆದರೆ, ಪೊಲೀಸ್ ಅಧಿಕಾರಿಗೆ ನೀಡಿರುವ ಶಿಕ್ಷೆಯನ್ನು ಷರತ್ತಿನ ಮೇಲೆ ಹೈಕೋರ್ಟ್ ಅಮಾನತಿನಲ್ಲಿ ಇಟ್ಟಿದೆ.
ಹೌದು ಈ ಪೊಲೀಸ್ ಅಧಿಕಾರಿ ಮುಂದಿನ ಒಂದು ವರ್ಷ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಬಾರದು ಎಂಬ ಷರತ್ತಿನಲ್ಲಿ ಈ ಶಿಕ್ಷೆಯನ್ನು ಹೈಕೋರ್ಟ್ ಸಸ್ಪೆಂಡ್ ಮಾಡಿದೆ. ಆದರೆ, ಭಾಗಿಯಾದಲ್ಲಿ ಈ ಶಿಕ್ಷೆ ಜಾರಿಯಾಗಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಘಟನೆ ಹಿನ್ನೆಲೆ…

ಅಲತ್ತೂರಿನಲ್ಲಿ ಸಬ್ ಇನ್ಸ್ ಪೆಕ್ಟರ್ ರಿನೀಶ್ ಅವರು ವಕೀಲರೊಬ್ಬರ ವಿರುದ್ಧ ಅವಾಚ್ಯ ಹಾಗೂ ನಿಂದನಾತ್ಮಕ ಪದ ಬಳಸಿದ್ದಾರೆ ಎಂದು ಆರೋಪಿಸಿ ಕೇರಳ ಹೈಕೋರ್ಟ್ ವಕೀಲರ ಸಂಘ ಈ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರಿನೀಶ್ ಹೈಕೋರ್ಟ್ ನ್ಯಾಯಪೀಠದ ಮುಂದೆ ಹಾಜರಾಗಿದ್ದಲ್ಲದೆ ಬೇಷರತ್ ಕ್ಷಮೆ ಯಾಚಿಸಿದ್ದರು.

ಆದರೆ, ಕ್ಷಮೆ ಯಾಚಿಸಿ ನ್ಯಾಯಪೀಠದ ಮುಂದೆ ಸಲ್ಲಿಸಿದ್ದ ಅಫಿಡವಿಟ್ನಲ್ಲಿ ಸೂಕ್ತ ಅಂಶಗಳಿರಲಿಲ್ಲ ಎಂಬ ಕಾರಣಕ್ಕೆ ಎರಡನೇ ಅಫಿಡವಿಟ್ ಸಲ್ಲಿಸಿದ್ದರು. ಈ ಪ್ರಮಾಣಪತ್ರದಲ್ಲಿ ತಮ್ಮ ತಪ್ಪಿಗೆ ಬೇಷರತ್ ಕ್ಷಮೆ ಯಾಚಿಸುವುದಾಗಿ ಅವರು ನಿವೇದನೆ ಮಾಡಿಕೊಂಡಿದ್ದರು. ಆದರೆ, ಎರಡನೇ ಅಫಿಡವಿಟ್ ನಲ್ಲೂ ಸರಿಯಾದ ಪದಬಳಕೆ ಮಾಡಿಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

ನ್ಯಾಯಾಂಗದ ಬಗ್ಗೆ ಅವಹೇಳನ ಮಾಡುವಂತಹ ಅಥವಾ ವಕೀಲರ ವಿರುದ್ಧ ನಿಂದನಾತ್ಮಕ ಪದ ಬಳಕೆ ಮಾಡುವ ಕೃತ್ಯವನ್ನು ನ್ಯಾಯಪೀಠ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ ಕೇರಳ ಹೈಕೋರ್ಟ್ ಪೊಲೀಸ್ ಅಧಿಕಾರಿಯ ಕೃತ್ಯಕ್ಕೆ ಎರಡು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಮುಂದಿನ ಒಂದು ವರ್ಷ ಇಂತಹ ಕೃತ್ಯದಲ್ಲಿ ಭಾಗಿಯಾಗುವುದಿಲ್ಲ ಎಂಬುದನ್ನು ಪಾಲಿಸಿದರೆ ಮಾತ್ರ ಶಿಕ್ಷೆಯಿಂದ ವಿನಾಯಿತಿ ನೀಡಬಹುದು ಎಂಬ ಷರತ್ತಿನ ಮೇರೆಗೆ ನ್ಯಾಯಪೀಠ, ತನ್ನ ಆದೇಶವನ್ನು ಅಮಾನತ್ತಿನಲ್ಲಿ ಇಟ್ಟಿದೆ.

ಕೃಪೆ

ಲಾಗೈಡ್ ಕಾನೂನು ಮಾಸಪತ್ರಿಕೆ

ಮೈಸೂರು

key words: Abuse,  lawyer, kerala high Court,  sentences, SI

Font Awesome Icons

Leave a Reply

Your email address will not be published. Required fields are marked *