ಉಡುಪಿ: ಮಣಿಪಾಲ ಸರಳೇಬೆಟ್ಟುವಿನ ನೆಹರು ನಗರದಲ್ಲಿ ಗುರುವಾರ ಸಂಜೆ ಹಸುಗಳಿಗೆ ಹುಲ್ಲು ತರಲೆಂದು ಗುಡ್ಡಕ್ಕೆ ತೆರಳಿದ್ದ ವೃದ್ಧೆಯೋರ್ವರು ಮನೆಯ ಎದುರಿನ ಗುಡ್ಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಮೃತದೇಹ ಮೇಲೆ ಗಾಯದ ಕುರುಹುಗಳಿದ್ದು, ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಸರಳೇಬೆಟ್ಟುವಿನ ನೆಹರು ನಗರ ನಿವಾಸಿ ಪುಷ್ಪಾ ನಾಯ್ಕ್ (66) ಎಂದು ಗುರುತಿಸಲಾಗಿದೆ. ಇವರು ನಿನ್ನೆ ಸಂಜೆ ಹಸುಗಳಿಗೆ ಹುಲ್ಲು ತರಲು ಮನೆಯ ಎದುರಿನ ಗುಡ್ಡಕ್ಕೆ ತೆರಳಿದ್ದರು. ಬಳಿಕ ಎಷ್ಟೇ ಹೊತ್ತಾದರೂ ಮನೆಗೆ ವಾಪಾಸು ಬರಲಿಲ್ಲ.
ಇದನ್ನು ಗಮನಿಸಿದ ಮನೆಯವರು ನೆರೆಮನೆಯವರ ಜೊತೆಗೂಡಿ ಗುಡ್ಡದಲ್ಲಿ ಹುಡುಕಾಡಿದ್ದಾರೆ. ಆದರೆ ಪುಷ್ಪ ನಾಯ್ಕ್ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಇಂದು ಬೆಳಿಗ್ಗೆ ಮನೆ ಎದುರು ಗುಡ್ಡೆಯಲ್ಲಿ ಪುಷ್ಪಾ ನಾಯ್ಕ್ ಶವ ಪತ್ತೆಯಾಗಿದೆ. ಅವರ ಕುತ್ತಿಗೆಯ ಭಾಗದಲ್ಲಿ ಗಾಯಗಳಾಗಿದ್ದು, ಕೈಗಳಿಗೂ ಪರಚಿದ ಗಾಯಗಳಾಗಿವೆ ಎಂದು ಪುತ್ರ ಗಣೇಶ್ ನಾಯ್ಕ್ ತಿಳಿಸಿದ್ದಾರೆ.
ಈ ಭಾಗದಲ್ಲಿ ಚಿರತೆ ಹಾವಳಿ ಕೂಡ ಹೆಚ್ಚಾಗಿದೆ. ಹೀಗಾಗಿ ಚಿರತೆ ದಾಳಿಯಿಂದ ಮೃತಪಟ್ಟಿದ್ದಾರೆಯೋ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿದ್ದಾರೆ ಎಂಬುವುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.