ʼದ ಪಾಲಸಿ ಫ್ರಂಟ್‌ ʼಗೆ 7.20 ಕೋಟಿ ರೂ. ಗುತ್ತಿಗೆ :  ಯಾವ ʼಮಟ್ಟು?ʼ ಕೆಲಸ ಮಾಡಿದೆ  ʼಗುಟ್ಟು?ʼ ಬಿಚ್ಚಿಡಿ  : ಎಚ್ಡಿಕೆ. – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

 

ಬೆಂಗಳೂರು, ಫೆ.೧೫, ೨೦೨೪ : ಐದು ಗ್ಯಾರಂಟಿಗಳ ಪ್ರಚಾರ ಮತ್ತು ಸಮೀಕ್ಷೆಗಾಗಿ ರಾಜ್ಯ ಕಾಂಗ್ರೆಸ್ ಸರಕಾರ ಜನರ ತೆರಿಗೆ ಹಣವನ್ನು ಮನಸೋ ಇಚ್ಛೆ ಪೋಲು ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಗುರುವಾರ ರಾಜ್ಯಪಾಲರ ಭಾಷಣಾ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು; ಗ್ಯಾರಂಟಿಗಳ ಪ್ರಚಾರಕ್ಕೆ ಕೋಟ್ಯಂತರ ರೂಪಾಯಿ ಸುರಿಯುತ್ತಿರುವ ಸರಕಾರವು, ಬೇಕು ಬೇಕಾದವರಿಗೆ, ಶಾಸಕರ ಕುಟುಂಬಕ್ಕೆ ಸಮೀಕ್ಷೆಯ ಹೆಸರಿನಲ್ಲಿ ಹಣ ಕೊಟ್ಟಿದೆ ಎಂದು ದೂರಿದರು.

ʼದ ಪಾಲಸಿ ಪ್ರಂಟ್‌ʼ ಎನ್ನುವ ದಿಕ್ಕಿಲ್ಲದ ಸಂಸ್ಥೆಗೆ ಸಮೀಕ್ಷೆ ಮಾಡುವುದಕ್ಕೆ 7.20 ಕೋಟಿ ರೂ. ಮೊತ್ತದ ಗುತ್ತಿಗೆ ಕೊಡಲಾಗಿದೆ. ಆದರೆ, ಕಂಪನಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದರ ಹಿಂದೆ ಮುಂದೆ ಯಾರಿದ್ದಾರೆ ಎನ್ನುವುದೂ ತಿಳಿದಿಲ್ಲ. ಆದರೂ, ಸರಕಾರ ಇಷ್ಟು ಪ್ರಮಾಣದಷ್ಟು ಹಣವನ್ನು ಆ ಕಂಪನಿಗೆ ಕೊಟ್ಟಿದೆ. ಹಾಗಾದರೆ, ಆ ಕಂಪನಿ ಯಾರದು? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ʼದ ಪಾಲಸಿ ಫ್ರಂಟ್ʼ ಸಲ್ಲಿಸಿದ ಪ್ರಸ್ತಾವನೆಗೆ ಒಂದೇ ದಿನದಲ್ಲಿ ಚಿರತೆ ವೇಗದಲ್ಲಿ ಒಪ್ಪಿಗೆ ನೀಡಲಾಗಿದೆ. ಈ ಕಡತಕ್ಕೆ ಬಂದಿರುವ ವೇಗ ನನಗೆ ಅಚ್ಚರಿ ಉಂಟು ಮಾಡಿದೆ. ಸರಕಾರದ ವಿವಿಧ ಇಲಾಖೆಗಳಲ್ಲಿ 1.37 ಲಕ್ಷ ಕಡತಗಳು ಕೊಳೆಯುತ್ತಾ ಬಿದ್ದಿವೆ. ಆದರೆ ʼದ ಪಾಲಸಿ ಫ್ರಂಟ್ʼ ಕಡತಕ್ಕೆ ವೇಗವಾಗಿ ಒಪ್ಪಿಗೆ ಸಿಕ್ಕಿದೆ. ಆ ಕಡತ ವಿಲೇವಾರಿ ಆಗಿದ್ದು ಹೇಗೆ? ಯಾವ ʼಪಟ್ಟು?ʼ ಯಾವ ʼಮಟ್ಟು?ʼ ಹಿಂದೆ ಕೆಲಸ ಮಾಡಿದೆ ಎನ್ನುವ ʼಗುಟ್ಟು?ʼ ಸದನದಲ್ಲಿ ರಟ್ಟಾಗಬೇಕಿದೆ ಎಂದರು ಕುಮಾರಸ್ವಾಮಿ ಅವರು.

ಇನ್ನೊಂದು ಸಂಸ್ಥೆಗೆ ಒಂದು ಕೋಟಿ ರೂಪಾಯಿ ಕೊಡಲಾಗಿದೆ. m2m ಎನ್ನುವ ಕಂಪನಿ ಅದಾಗಿದ್ದು, ಅದೂ ಗ್ಯಾರಂಟಿಗಳ ಬಗ್ಗೆ ಸಮೀಕ್ಷೆ ಮಾಡುತ್ತಿದೆ. ಮಂಡ್ಯ ಜಿಲ್ಲೆಯ ಶಾಸಕರೊಬ್ಬರ ಪತ್ನಿ ನಿರ್ದೇಶಕಿ ಆಗಿರುವ ಕಂಪನಿಗೆ ಕೂಡ ಗ್ಯಾರಂಟಿಗಳ ಪ್ರಚಾರಕ್ಕಾಗಿ ಕೋಟಿ ರೂಪಾಯಿ ನೀಡಲಾಗಿದೆ ಎಂದು ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಅವರ ಹೆಸರೆತ್ತದೆ ಆರೋಪ ಮಾಡಿದರು.

ಗ್ಯಾರಂಟಿಗಳ ಹೆಸರಿನಲ್ಲಿ ಹೀಗೆ ಹಣವನ್ನು ಇಷ್ಟ ಬಂದ ಹಾಗೆ ಪೋಲು ಮಾಡಲಾಗುತ್ತಿದೆ. ಗ್ಯಾರಂಟಿಗಳ ಹೆಸರಿನಲ್ಲಿ ಲೂಟಿಜಾತ್ರೆ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದರು.

ಪ್ರಚಾರಕ್ಕಾಗಿಯೇ ಈವರೆಗೂ ೧೪೦ ಕೋಟಿ ರೂ.ಗಳನ್ನು ರಾಜ್ಯ ಸರಕಾರ ವೆಚ್ಚ ಮಾಡಿದೆ. ಬೆಳಗ್ಗೆ ಯಾವ ಟೀವಿ ನೋಡಿದರೂ, ಯಾವ ಪೇಪರ್ ನೋಡಿದರೂ ನಿಮ್ಮದೇ (ಸರಕಾರದ್ದು) ದರ್ಶನ ಆಗುತ್ತಿದೆ. ಎದ್ದ ಕೂಡಲೇ ದೇವರ ದರ್ಶನದ ಬದಲು ನಿಮ್ಮದೇ ದರ್ಶನ ಆಗುತ್ತಿದೆ ಎಂದು ಸರಕಾರದ ವಿರುದ್ಧ ಅವರು ಪ್ರಹಾರ ನಡೆಸಿದರು.

ಪರಿಶುದ್ಧ ಆಡಳಿತ ಎನ್ನುತ್ತೀರಿ. ಎಲ್ಲಿ ನೋಡಿದರೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮಧ್ಯವರ್ತಿಗಳ ಉಪಟಳ ವಿಪರೀತವಾಗಿದೆ ಎಂದು ಅವರು ಹೇಳಿದರು.

key words : congress ̲ guareenty ̲ hdk ̲policy front ̲ allegation ̲ karnataka

 

Font Awesome Icons

Leave a Reply

Your email address will not be published. Required fields are marked *