ನವದೆಹಲಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಇಂದು ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಬಿಜೆಪಿಯ ರಾಜಕೀಯ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಗಳ ಕುರಿತು 5 ಪ್ರಶ್ನೆಗಳಿಗೆ ಉತ್ತರಗಳನ್ನು ಕೇಳಿದ್ದಾರೆ.
ಬಿಜೆಪಿಯ ವರ್ತನೆ ಇದೇ ರೀತಿ ಮುಂದುವರಿದರೆ ನಮ್ಮ ದೇಶ ಮತ್ತು ಪ್ರಜಾಪ್ರಭುತ್ವ ಕೊನೆಗೊಳ್ಳುತ್ತದೆ ಎಂದು ಅರವಿಂದ್ ಕೇಜ್ರಿವಾಲ್ ಅವರು ಮೋಹನ್ ಭಾಗವತ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಎಲ್.ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿಯಂತಹ ನಾಯಕರಿಗೆ ಅನ್ವಯಿಸಿದಂತೆ ನಿವೃತ್ತಿಯ ವಯಸ್ಸಿನ ಆರ್‌ಎಸ್‌ಎಸ್-ಬಿಜೆಪಿಯ ನಿಯಮವು ನರೇಂದ್ರ ಮೋದಿಗೂ ಅನ್ವಯಿಸುತ್ತದೆಯೇ? ಬಿಜೆಪಿ ಮುಖ್ಯಸ್ಥ ಜೆ.ಪಿ ನಡ್ಡಾ ಅವರು ತಮ್ಮ ಪಕ್ಷಕ್ಕೆ ಆರ್ಎಸ್ಎಸ್ನ ಅಗತ್ಯವಿಲ್ಲ ಎಂದು ಹೇಳಿದಾಗ ಮೋಹನ್ ಭಾಗವತ್ ಅವರಿಗೆ ಹೇಗೆ ಅನಿಸಿತು? ಎಂಬ ಪ್ರಶ್ನೆಗಳನ್ನು ಕೂಡ ಅರವಿಂದ್ ಕೇಜ್ರಿವಾಲ್ ಕೇಳಿದ್ದಾರೆ.
ರಾಜಕೀಯ ಸಂಘಟನೆಗಳನ್ನು ಒಡೆಯಲು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳುವ ಬಿಜೆಪಿಯ ರಾಜಕೀಯವನ್ನು ನೀವು ಒಪ್ಪುತ್ತೀರಾ? ಎಂದು ಅರವಿಂದ್ ಕೇಜ್ರಿವಾಲ್ ಆರ್‌ಎಸ್‌ಎಸ್ ಮುಖ್ಯಸ್ಥರನ್ನು ಕೇಳಿದ್ದಾರೆ. ಈ ಪ್ರಶ್ನೆಗಳು ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿದೆ. ಮೋಹನ್ ಭಾಗವತ್ ಅವರು ಈ ಬಗ್ಗೆ ಯೋಚಿಸಿ ಉತ್ತರಗಳನ್ನು ನೀಡುತ್ತಾರೆ ಎಂದು ಜನರು ನಿರೀಕ್ಷಿಸುತ್ತಾರೆ ಎಂದು ಕೇಜ್ರಿವಾಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.