ʼಮತ್ತೇ ಮೋದಿಯನ್ನೇ ಆಯ್ಕೆ ಮಾಡ್ತಾರೆʼ: ಚುನಾವಣೆಗೆಗಾಗಿ ಬಿಜೆಪಿ ಹೊಸ ‘ಹಾಡು’ ರಿಲೀಸ್

ನವದೆಹಲಿ: ದೇಶದ ಗಮನ ಸೆಳೆದಿರುವ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇವೆ. ಒಂದೆಡೆ, ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ರಚಿಸಿರುವ ಇಂಡಿಯಾ ಒಕ್ಕೂಟದಲ್ಲಿ ಬಿರುಕು ಮೂಡಿದರೆ, ಮತ್ತೊಂದೆಡೆ ಬಿಜೆಪಿಯು ಚುನಾವಣೆಗೆ ಸಿದ್ಧವಾಗುತ್ತಿದೆ.

ಇಂದು ಯುಪಿ ಯ ಬುಲಂದ್‌ಶಹರ್‌ನಲ್ಲಿ ಪ್ರಧಾನಿ ಮೋದಿ ಅವರು ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ. ಇದರ ಬೆನ್ನಲ್ಲೇ, ಬಿಜೆಪಿಯು 2024ರ ಲೋಕಸಭೆ ಚುನಾವಣೆಗಾಗಿ ‘ಪ್ರಚಾರದ ಹಾಡು’ ಬಿಡುಗಡೆ ಮಾಡಿದೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿಯೇ ಹಿಂದಿ ಹಾಡು ಬಿಡುಗಡೆ ಮಾಡಿದ್ದಾರೆ. ಈ ಹಾಡಿನ ವಿಡಿಯೊ ಈಗ ವೈರಲ್‌ ಆಗಿದೆ. “ನಾವು ಬರೀ ಕನಸು ಕಾಣುವುದಿಲ್ಲ, ಆ ಕನಸು ನನಸು ಮಾಡುತ್ತೇವೆ. ಇದೇ ಕಾರಣಕ್ಕಾಗಿ ಎಲ್ಲರೂ ಮೋದಿ ಅವರನ್ನೇ ಆಯ್ಕೆ ಮಾಡುತ್ತಾರೆ” ಎಂಬುದು ಹಾಡಿನ ಸಾರವಾಗಿದೆ. ಹಾಗೆಯೇ, ಹಾಡಿನ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ.

ನರೇಂದ್ರ ಮೋದಿ ಅವರು ದೇಶವನ್ನು ತಾಯಿ ಎಂದು ಭಾವಿಸಿದ್ದಾರೆ. ದೇಶದ ಜನರನ್ನು ದೇವರೆಂದು ಭಾವಿಸಿದ್ದಾರೆ. ಅವರು ಖ್ಯಾತಿಗೂ ಮೊದಲು ಕೆಲಸವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದೇ ಕಾರಣಕ್ಕಾಗಿ ದೇಶದ ಜನರು ಅವರ ಮಾತನ್ನು ಕೇಳುತ್ತಾರೆ. ದೇಶದ ಹೆಣ್ಣುಮಕ್ಕಳೀಗ ನಾಯಕಿಯರಾಗಿ ಹೊರಹೊಮ್ಮಿದ್ದಾರೆ. ಭ್ರಷ್ಟಾಚಾರಿಗಳು ಹೆದರಿ ಮೂಲೆ ಸೇರಿದ್ದಾರೆ. ನರೇಂದ್ರ ಮೋದಿ ಅವರು ನೆಲದ ಮೇಲೆ ಇದ್ದರೂ ಗುರಿ ಆಕಾಶಕ್ಕೆ ಇದೆ. ಅವರು ಆಕಾಶವನ್ನು ತಲುಪಿದ್ದಾರೆ” ಎಂಬುದು ಹಾಡಿನ ಸಾಹಿತ್ಯದ ಆಶಯವಾಗಿದೆ.

ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಬಿಡುಗಡೆ ಮಾಡುತ್ತಿರುವ ಎರಡನೇ ಹಾಡು ಇದಾಗಿದೆ. 2023ರ ಡಿಸೆಂಬರ್‌ನಲ್ಲೂ ಬಿಜೆಪಿಯು ಫಿರ್‌ ಆಯೇಗಾ ಮೋದಿ ಎಂಬ ಆಶಯದಲ್ಲಿ ಹಾಡು ಬಿಡುಗಡೆ ಮಾಡಿತ್ತು. ಈಗ ಮತ್ತೊಂದು ಹಾಡಿನ ಮೂಲಕ ಜನರ ಗಮನ ಸೆಳೆಯಲು ಯತ್ನಿಸುತ್ತಿದೆ.

Font Awesome Icons

Leave a Reply

Your email address will not be published. Required fields are marked *