ಗಾಂಧಿನಗರ: ಜ.೧೨ರ ವರೆಗೆ ನಡೆಯಲಿರುವ ವೈಬ್ರಂಟ್ ಗುಜರಾತ್ ಶೃಂಗಸಭೆಯನ್ನು ಪ್ರಧಾನಿ ಮೋದಿ ಬುಧವಾರ ಉದ್ಘಾಟಿಸಲಿದ್ದಾರೆ. ಇದರ ಅಂಗವಾಗಿ ಆಯೋಜಿಸಲಾಗಿದ್ದ ವಸ್ತುಪ್ರದರ್ಶನಕ್ಕೆ ಅವರು ಮಂಗಳವಾರ ಚಾಲನೆ ನೀಡಿದರು.
ಹೆಲಿಪ್ಯಾಡ್ ಗ್ರೌಂಡ್ ವಸ್ತು ಪ್ರದರ್ಶನ ಕೇಂದ್ರದಲ್ಲಿ ೨ ಲಕ್ಷ ಚದರ ಮೀಟರ್ ವಿಸ್ತೀರ್ಣದ ಜಾಗದಲ್ಲಿ ಸ್ಥಾಪಿಸಲಾದ ಮಳಿಗೆಗಳಿಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಜೊತೆ ಭೇಟಿ ನೀಡಿದ ಪ್ರಧಾನಿಯನ್ನು ನೂರಾರು ಕಾಲೇಜು ವಿದ್ಯಾರ್ಥಿಗಳು ಸ್ವಾಗತಿಸಿದರು.
ಈ ವಸ್ತುಪ್ರದರ್ಶನದಲ್ಲಿ ಆಸ್ಟ್ರೇಲಿಯಾ, ತಾಂಜಾನಿಯ, ದಕ್ಷಿಣ ಕೊರಿಯಾ, ಬಾಂಗ್ಲಾ, ಯುಎಇ, ಯುಕೆ, ಜರ್ಮನಿ, ರಷ್ಯಾ, ಜಪಾನ್ ಸೇರಿದಂತೆ ಹಲವಾರು ದೇಶಗಳು ಪಾಲ್ಗೊಂಡಿದ್ದು, ತಮ್ಮಲ್ಲಿನ ಹೊಸ ತಂತ್ರಜ್ಞಾನ ಮತ್ತು ಕೈಗಾರಿಕೆಗಳ ಬಗೆಗಿನ ಮಾಹಿತಿಗಳನ್ನು ಪ್ರದರ್ಶಿಸಲಿವೆ.
ಈ ದೇಶಗಳ ಸಂಶೋಧನಾ ಕ್ಷೇತ್ರದ ೧೦೦೦ ಕಂಪೆನಿಗಳು ಭಾಗವಹಿಸಿದ್ದು, ಮಹಿಳಾ ಸಬಲೀಕರಣ, ಸಣ್ಣ ಹಾಗು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿ, ಹೊಸ ತಂತ್ರಜ್ಞಾನ, ಹಸಿರು ಮತ್ತು ಸ್ಮಾರ್ಟ್ ಮೂಲಸೌಕರ್ಯ, ಸುಸ್ಥಿರ ಇಂಧನ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಲಾಗಿದೆ.
ಶೃಂಗಸಭೆಯಲ್ಲಿ ಪ್ರಧಾನಿ ವಿಶ್ವದ ವಿವಿಧ ನಾಯಕರು, ಜಾಗತಿಕ ಕಂಪೆನಿಗಳ ಸಿಇಒಗಳ ಜೊತೆ ಮಾತುಕತೆ ನಡೆಸಲಿದ್ದಾರೆ.