ಉಡುಪಿ: ಕಾರ್ಕಳ ತಾಲೂಕಿನ ಅಜೆಕಾರು ಎಂಬಲ್ಲಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಪತ್ನಿಯೇ ಕೊಂದ ಪ್ರಕರಣ ಕೆಲವು ದಿನಗಳ ಹಿಂದೆ ಸಂಭವಿಸಿತ್ತು. ಇದೀಗ ಈ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಇದೇ ವೇಳೆ ತನಿಖೆಯ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಆರೋಪಿ ಆರ್ಥಿಕವಾಗಿ ಪ್ರಬಲನಾಗಿದ್ದು ತನಿಖೆಯನ್ನು ಹಳ್ಳ ಹಿಡಿಸುವ ಕೆಲಸ ನಡೆಯುತ್ತಿದೆ ಎಂದು ಮೃತ ಬಾಲಕೃಷ್ಣ ಪೂಜಾರಿ ಸಹೋದರ ಪ್ರಕಾಶ್ ಪೂಜಾರಿ ಗಂಭೀರ ಆರೋಪ ಮಾಡಿದ್ದಾರೆ.
ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಲಕೃಷ್ಣ ಪೂಜಾರಿ ಸಾವಿಗೂ ಮುನ್ನ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು.ಅವರಿಗೆ ಪತ್ನಿ ಪ್ರತಿಮಾ ಮತ್ತು ಪ್ರಿಯಕರ ದಿಲೀಪ್ ಹೆಗ್ಡೆ ಸ್ಟೋ ಪಾಯಿಸನ್ ನೀಡುತ್ತಿದ್ದರು. ಆದರೆ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಯಾಕೆ ಅದು ಗೊತ್ತಾಗಲಿಲ್ಲ? ಗ್ಲೋ ಪಾಯಿಸನ್ ವಿಷಯವನ್ನು ಆಸ್ಪತ್ರೆಯವರು ಮುಚ್ಚಿಟ್ಟಿದ್ದು ಯಾಕೆ? ಎಂದು ಸಹೋದರ ಪ್ರಕಾಶ್ ಪೂಜಾರಿ ಪ್ರಶ್ನೆ ಮಾಡಿದ್ದಾರೆ.
ಎರಡನೇ ಆರೋಪಿ ಪ್ರತಿಮಾ ಪ್ರಿಯಕರ ದಿಲೀಪ್ ಹೆಗ್ಡೆ ಪ್ರಭಾವಿ ವ್ಯಕ್ತಿಯಾಗಿದ್ದು ಕಾರ್ಕಳದಲ್ಲಿ ಲಾಡ್ಜ್ ನಡೆಸುವ ಪ್ರತಿಷ್ಠಿತ ವ್ಯಕ್ತಿಯ ಮಗನಾಗಿದ್ದಾನೆ. ಪೊಲೀಸ್ ಇಲಾಖೆಯ ಮೇಲೆ ದಿಲೀಪ್ ಕುಟುಂಬದವರು ಪ್ರಭಾವ ಬೀರುವ ಆತಂಕ ನಮಗೆ ಇದೆ. ಸರಿಯಾದ ತನಿಖೆ ನಡೆಸಬೇಕು ಎಂದು ಡಿವೈಎಸ್ಪಿಗೆ ಆಗ್ರಹ ಮಾಡಿದ್ದೇವೆ. ಪೊಲೀಸರು ಯಾವುದೇ ಆಮಿಷಗಳಿಗೆ ಒಳಗಾಗದೆ ಸರಿಯಾದ ತನಿಖೆ ನಡೆಸಬೇಕು. ಈ ಪ್ರಕರಣದಲ್ಲಿ ನ್ಯಾಯ ಬೇಕು. ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಬೇಕು. ಆಗದಿದ್ದರೆ ಸಮಾಜಕ್ಕೆ ಬೇರೆಯದೇ ಸಂದೇಶ ರವಾನೆಯಾಗುತ್ತದೆ ಎಂದರು.