ಕೆ ಆರ್ ಪೇಟೆ: ತಾಲ್ಲೂಕು ಹೇಮಗಿರಿ ಕ್ಷೇತ್ರ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.
ಶಾಸಕ ಹೆಚ್ ಟಿ ಮಂಜು, ತಹಶಿಲ್ದಾರ್ ನಿಸರ್ಗ ಪ್ರಿಯ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ರಥವನ್ನು ಎಳೆಯುವುದರ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಇದೇ ವೇಳೆ ದನಗಳ ಜಾತ್ರೆಯಲ್ಲಿ ಉತ್ತಮ ರಾಸುಗಳನ್ನು ಕಟ್ಟಿದ್ದ ರಾಸುಗಳ ಮಾಲಿಕರಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಣೆಯನ್ನು ನೀಡಲಾಯಿತು.
ಈ ವೇಳೆ ಶಾಸಕ ಹೆಚ್ ಟಿ ಮಂಜು ಮಾತನಾಡಿ ಐತಿಹಾಸಿಕ ಸ್ಥಳ ಹೇಮಗಿರಿ ಜಾತ್ರೆಗೆ ನಾವು ಚಿಕ್ಕವರಾಗಿದ್ದ ಸಂದರ್ಭದಲ್ಲಿ ಬಂದು ಹೋಗುತ್ತಿದ್ದೆವು. ಅದರಲ್ಲೂ ದನಗಳ ಜಾತ್ರೆ ಎಂದರೆ ನಮಗೆ ಎಲ್ಲಿಲ್ಲದ ಪ್ರೀತಿ ಉತ್ಸಾಹ ಮೂಡಿ ಬರುತ್ತಿತ್ತು. ನಾನು ಶಾಸಕರಾಗಿ ಆಯ್ಕೆಯಾದ ನಂತರ ಮೊದಲನೇ ಕಾರ್ಯಕ್ರಮವಾಗಿದೆ. ದನಗಳ ಜಾತ್ರೆ ಹಾಗೂ ರಥೋತ್ಸವವು ಅದ್ದೂರಿಯಾಗಿ ವಿಜೃಂಭಣೆಯಿಂದ ಆಚರಿಸಲು ಎಲ್ಲರೂ ಸಹಕಾರ ನೀಡಿದ್ದೀರಿ. ಮುಂದೆಯೂ ಸಹ ಇನ್ನೂ ಅದ್ದೂರಿಯಾಗಿ ಮಾಡಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಜಾತ್ರಾ ಮಹೋತ್ಸವಕ್ಕೆ ಬಂದಿದ್ದ ಮಕ್ಕಳು, ಮಹಿಳೆಯರು, ಯುವಕರು, ಸಾರ್ವಜನಿಕರು ಹಾಗೂ ಭಕ್ತರು ಕಲ್ಯಾಣ ವೆಂಕಟರಮಣ ಸ್ವಾಮಿ ಥೇರಿಗೆ ಹಣ್ಣು ಜವನ ಎಸೆದು ಪುಳಕಿತರಾದಲ್ಲದೆ ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಆರ್ ಟಿ ಓ ಅಧಿಕಾರಿ ಮಲ್ಲಿಕಾರ್ಜುನ, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಶಾಸಕ ಸಹೋದರ ಹೆಚ್ ಟಿ ಲೋಕೇಶ್, ಟಿಎಪಿಸಿಎಂಎಸ್ ನಿರ್ದೇಶಕ ತೆರ್ನೇನಹಳ್ಳಿ ಬಲದೇವ್, ಗ್ರಾ.ಪಂ.ಮಾಜಿ ಅಧ್ಯಕ್ಷ ಕಾಯಿ ಮಂಜೇಗೌಡ, ಬಂಡಿಹೊಳೆ ಗ್ರಾ.ಪಂ.ಅಧ್ಯಕ್ಷೆ ಜಯಲಕ್ಷ್ಮಿಅಣ್ಣಪ್ಪ,ಉಪಾಧ್ಯಕ್ಷೆ ಲೀಲಾವತಿ ಜಯರಾಂ,ಐಸಿಎಲ್ ಶುಗರ್ ಫ್ಯಾಕ್ಟರಿ ಹಿರಿಯ ಉಪಾಧ್ಯಕ್ಷ ಎಂಡಿ ರವಿರೆಡ್ಡಿ, ಸೇರಿದಂತೆ ಇತರರು ಹಾಜರಿದ್ದರು.