ಈ ವೇಳೆ ಅಪರ್ಣಾರ ನಿವಾಸಕ್ಕೆ ಬಂದ ನಟ ಮಂಡ್ಯ ರಮೇಶ್ ತಮ್ಮ ಗೆಳತಿಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ‘ಕನ್ನಡ ಅಂದ್ರೆ ಅಪರ್ಣ ಅದರಲ್ಲಿ ಎರಡನೇ ಮಾತಿಲ್ಲ. ಅವರಿಲ್ಲ ಅನ್ನೋ ಸುದ್ದಿ ತಿಳಿದು ಒಂಥರಾ ಗರ ಬಡಿದಂತಾಗಿದೆ. ಆಕೆಯ ಕನ್ನಡ ಎಷ್ಟು ಖುಷಿ ಕೊಡುತ್ತಿತ್ತು ಅವರ ಮನುಷ್ಯತ್ವ ಅದಕ್ಕಿಂತ ಸಂತಸ ಮೂಡಿಸುತ್ತಿತ್ತು. ಇಷ್ಟು ಭೀಕರವಾಗಿ ಸಾವು ಬಂದಿದ್ದು, ಆಘಾತ. ಕನ್ನಡನಾಡು ಶುದ್ಧ ಕನ್ನಡತಿಯನ್ನು ಕಳೆದುಕೊಂಡಿದೆ. ಚೆಂದವಾಗಿ ಮಾತಾಡಬಲ್ಲ ಅಪರ್ಣ, ತಾನೊಂದು ನಿರೂಪಣೆ ಶಾಲೆ ತೆರೆಯಬೇಕು ಎಂದು ಹೇಳ್ತಿದ್ದರು. ಆದ್ರೆ, ಆ ಕನಸು ಕನಸಾಗಿಯೇ ಉಳಿಯಿತು’ ಎಂದರು.
‘ಕನ್ನಡದ ದೊಡ್ಡ ಶಕ್ತಿ ಕಣ್ಮರೆಯಾಗಿದೆ. ಭಾಷೆಯ ಮಹತ್ವವನ್ನು ಸೂಕ್ಷ್ಮವಾಗಿ ಬೇರೆಯವರಿಗೆ ತಲುಪಿಸುವ ಕೆಲಸ ಮಾಡ್ತಿದ್ರು. ಶುದ್ಧ ಕನ್ನಡವನ್ನು ಎಲ್ಲಿಯವರೆಗೂ ಪ್ರೀತಿಸ್ತಾರೋ ಅಲ್ಲಿಯವರೆಗೂ ಅಪರ್ಣ ನೆನಪಲ್ಲಿ ಇರ್ತಾರೆ. ಮಜಾ ಟಾಕೀಸ್ನಲ್ಲಿ ತುಂಬಾ ತಮಾಷೆ ಮಾಡ್ತಿದ್ರು, ದೊಡ್ಡ ಸಂಸ್ಕಾರವಂತೆ ಆಕೆ. ಶುದ್ಧ ತಮಾಷೆಯನ್ನು, ಶುದ್ಧ ಕನ್ನಡದಲ್ಲಿ ಮಾಡ್ತಿದ್ದರು, ಅದು ವಿಶೇಷ. ಅವರ ತಂದೆ ದೊಡ್ಡ ಪತ್ರಕರ್ತರು. ಅಪ್ಪನ ಹೆಸರನ್ನು ಮೀರಿಸಿ ತನ್ನ ಅಸ್ತಿತ್ವ ಸ್ಥಾಪಿಸಿಕೊಂಡ ಮಗಳು ಇವರು. ಆಕೆಯ ಸಂದರ್ಶನಗಳು, ನಡೆಸಿಕೊಟ್ಟ ಕಾರ್ಯಕ್ರಮಗಳು ಮರೆಯಲಾಗದು’ ಎಂದು ಭಾವುಕರಾದರು.