ಅಬುಧಾಬಿ: ಪ್ರಧಾನಿ ನರೇಂದ್ರ ಮೋದಿ ಅಬುಧಾಬಿಯ ಪ್ರವಾಸ ಕೈಗೊಂಡಿದ್ದಾರೆ. ಅರಬ್ ರಾಷ್ಟ್ರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮೊದಲ ಹಿಂದೂ ದೇವಾಲಯವನ್ನು ನಾಳೆ ಉದ್ಘಾಟಿಸಲಿದ್ದಾರೆ. ಹೀಗಾಗಿ ಅಬುಧಾಬಿಯಲ್ಲಿ ನಡೆಯುತ್ತಿರೋ ‘ಅಹ್ಲಾನ್ ಮೋದಿ’ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಿದ್ದಾರೆ. ಜಯೇದಾ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ಕಲರ್ಫುಲ್ ಕಾರ್ಯಕ್ರಮ ನಡೆದಿದ್ದು, 65 ಸಾವಿರಕ್ಕೂ ಹೆಚ್ಚು ಭಾರತೀಯರು ಜಮಾಯಿಸಿದ್ದಾರೆ.
ಪ್ರಧಾನಿ ಮೋದಿ ಭಾಷಣ ಆರಂಭಿಸ್ತಿದ್ದಂತೆ ಮೋದಿ ಮೋದಿ ಎಂಬ ಘೋಷಣೆ ಮೊಳಗಿತು. ಭಾರತ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ ಎಂದು ಅಬುಧಾಬಿಯಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಕನ್ನಡದಲ್ಲಿ ಮಾತನಾಡಿದ್ದಾರೆ. ಭಾರತ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ ಎಂದ ಮೋದಿ ತೆಲುಗು, ತಮಿಳು, ಮಲಯಾಳಂನಲ್ಲೂ ಭಾಷಣ ಆರಂಭಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮಕ್ಕೆ ಅಬುಧಾಬಿಯಲ್ಲಿರುವ ಅನಿವಾಸಿ ಭಾರತೀಯರಿಂದ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಬಂದಿದೆ.
ನಾನು ನನ್ನ ಕುಟುಂಬ ಸದಸ್ಯರನ್ನು ಭೇಟಿಯಾಗಲು ಬಂದಿದ್ದೇನೆ. ನೀವು ಹುಟ್ಟಿದ ಮಣ್ಣಿನ ಪರಿಮಳವನ್ನು ನಾನು ತಂದಿದ್ದೇನೆ. 140 ಕೋಟಿ ಭಾರತೀಯರ ಸಂದೇಶವನ್ನು ನಾನು ತಂದಿದ್ದೇನೆ. ನನ್ನ ಸ್ವಾಗತಿಸಲು ಏರ್ಪೋರ್ಟ್ಗೆ ಅಧ್ಯಕ್ಷರ ಸೋದರರು ಬಂದಿದ್ದರು. ಇದು 140 ಕೋಟಿ ಭಾರತೀಯರಿಗೆ ಸಿಕ್ಕ ಮನ್ನಣೆ. 2015ರಲ್ಲಿ ನಾನು ಮೊದಲ ಬಾರಿಗೆ ಯುಎಇಗೆ ಭೇಟಿ ನೀಡಿದ್ದೆ. ಕಳೆದ 10 ವರ್ಷದಲ್ಲಿ 7 ಸಲ ನಾನು ಯುಎಇಗೆ ಭೇಟಿ ನೀಡಿದ್ದೇನೆ ಎಂದು ಹೇಳಿದರು.
2047ರೊಳಗೆ ವಿಕಸಿತ ಭಾರತ ನಿರ್ಮಾಣವಾಗಲಿದೆ. ಶಿಕ್ಷಣ, ಸಂಶೋಧನೆ ಸೇರಿ ಹಲವು ಕ್ಷೇತ್ರಗಳಲ್ಲಿ ಭಾರತ-ಯುಎಇ ಸಂಬಂಧ ಮತ್ತಷ್ಟು ವೃದ್ಧಿಯಾಗುತ್ತಿದೆ. ಭಾರತೀಯರಿಗೆ ಅನುಕೂಲಕ್ಕಾಗಿ ಯುಎಇ ಸರ್ಕಾರ ರುಪೇ ಕಾರ್ಡಗೆ ಜೀವನ ಎಂಬ ಹೆಸರು ನೀಡಿದೆ. ವಿಶ್ವದ ಆರ್ಥಿಕತೆಯಲ್ಲಿ ಭಾರತವನ್ನು 3ನೇ ಸ್ಥಾನಕ್ಕೆ ತರುತ್ತೇನೆ. 3ನೇ ಬಾರಿ ಅಧಿಕಾರಕ್ಕೆ ಬಂದ್ರೆ ಆರ್ಥಿಕತೆಯನ್ನು 3ನೇ ಸ್ಥಾನಕ್ಕೆ ತರುವೆ. ಇದು ನನ್ನ ಗ್ಯಾರಂಟಿ ಎಂದು ಹೇಳಿದರು.