ಜೆರುಸಲೇಂ: ಬೈರುತ್ ನಲ್ಲಿ ನಡೆದ ನಿಖರವಾದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ರಾದ್ವಾನ್ ಫೋರ್ಸ್ ನ ಕಮಾಂಡರ್ ಇಬ್ರಾಹಿಂ ಅಕಿಲ್ ನನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಶುಕ್ರವಾರ (ಸೆ.20) ಘೋಷಿಸಿದೆ. ಹಿರಿಯ ಕಮಾಂಡರ್ ಗಳ ಸಭೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದ್ದು, 10 ಉನ್ನತ ಅಧಿಕಾರಿಗಳು ಸೇರಿದಂತೆ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ.
1983 ರಲ್ಲಿ ಬೈರುತ್ ನಲ್ಲಿರುವ ಯುಎಸ್ ರಾಯಭಾರ ಕಚೇರಿ ಮತ್ತು ಮೆರೈನ್ ಬ್ಯಾರಕ್ ಗಳ ಬಾಂಬ್ ದಾಳಿಯಲ್ಲಿನ ಪಾತ್ರಕ್ಕಾಗಿ ಯುನೈಟೆಡ್ ಸ್ಟೇಟ್ಸ್ ನ ವಾಂಟೆಡ್ ಪಟ್ಟಿಯಲ್ಲಿರುವ ಹಿರಿಯ ಹಿಜ್ಬುಲ್ಲಾ ಮಿಲಿಟರಿ ವ್ಯಕ್ತಿ ಅಕಿಲ್ ಹಿಜ್ಬುಲ್ಲಾದಿಂದ ಅದರ ಪ್ರಮುಖ ನಾಯಕರಲ್ಲಿ ಒಬ್ಬ. ಅಕಿಲ್ ಸಾವಿನ ಬಗ್ಗೆ ಹಿಜ್ಬುಲ್ಲಾ ದೃಢಪಡಿಸಿದ್ದು, ಆತನನ್ನು “ಮಹಾನ್ ಜಿಹಾದಿ ನಾಯಕ” ಎಂದು ಕರೆದಿದೆ.ಲೆಬನಾನ್ ನಲ್ಲಿ ನೂರಾರು ಅಮೆರಿಕನ್ನರನ್ನು ಕೊಂದ 1983 ರ ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಯುನೈಟೆಡ್ ಸ್ಟೇಟ್ಸ್ ಅಕಿಲ್ ತಲೆಗೆ 7 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ. 1980 ರ ದಶಕದಲ್ಲಿ ಅಮೇರಿಕನ್ ಮತ್ತು ಯುರೋಪಿಯನ್ ಒತ್ತೆಯಾಳುಗಳ ಅಪಹರಣದಲ್ಲಿ ಅಕಿಲ್ ಕೂಡ ಭಾಗಿಯಾಗಿದ್ದನು.