ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆದ ರಕ್ಷಿತ್ ಶೆಟ್ಟಿ

ಬೆಂಗಳೂರು: ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ  ಇತ್ತೀಚೆಗೆ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಮಾಡಿದ್ದಾರೆ.

ರಾಮನ ದರ್ಶನ ಮಾಡುವ ಸಮಯದಲ್ಲಿ ತಮಗಾದ ವಿಶೇಷ ಅನುಭೂತಿಯ ಬಗ್ಗೆ, ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ.

‘ಪ್ರಾಣ ಪ್ರತಿಷ್ಠೆ ಆದಾಗಿನಿಂದಲೂ ರಾಮನನ್ನು ನೇರವಾಗಿ ನೋಡಲು ಕಾತರನಾಗಿದ್ದೆ. ಪ್ರಾಣ ಪ್ರತಿಷ್ಠೆಯ ದಿನದಿಂದಲೂ ರಾಮನ ಕಣ್ಣುಗಳು ನನ್ನನ್ನು ಬಹುವಾಗಿ ಸೆಳೆದಿದ್ದವು. ಆ ಕಣ್ಣುಗಳು ನಿಜವಾದ ಕಣ್ಣುಗಳೇ ಎಂದು ನನಗೆ ಪದೇ ಪದೇ ಅನ್ನಿಸಿತ್ತು. ಅದೆಷ್ಟೋ ಬಾರಿ ಚಿತ್ರಗಳನ್ನು ಜೂಮ್ ಮಾಡಿ ಮಾಡಿ ನೋಡಿದ್ದೆ. ‘ಇಂದು ನಾನು ಗಮನಿಸಿದಂತೆ ಕಣ್ಣುಗಳ ಆ ತೇಜತೆಯನ್ನು ಮೂರ್ತಿ ಸ್ವತಃ ತಾನೇ ಆವಾಹಿಸಿಕೊಂಡಿದೆಯೇನೋ ಎನ್ನಿಸಿತು. ಕಣ್ಣುಗಳಿಗೆ ಆ ತೇಜಸ್ಸು ಪ್ರಾಪ್ತವಾಗಲು ಕಣ್ಣಿನ ಬಿಳಿಯ ಭಾಗವನ್ನು ಭಿನ್ನವಾದ ಕುಸುರಿ ಕೆಲಸ ಮಾಡಲಾಗಿದೆ ಎಂದು ನಾನು ಅರಿತುಕೊಂಡೆ’

‘ಇಂದು ಕೊನೆಗೂ ನಾನು ಹತ್ತಿರದಿಂದ ರಾಮನ ಮೂರ್ತಿಯನ್ನು ಕಂಡೆ. ಬಹಳ ಕಡಿಮೆ ಮಂದಿಗೆ ಅಷ್ಟು ಹತ್ತಿರದಿಂದ ರಾಮನನ್ನು ಕಣ್ಣು ತುಂಬಿಸಿಕೊಳ್ಳುವ ಅದೃಷ್ಟ ಪ್ರಾಪ್ತವಾಗುತ್ತದೆ. ರಾಮನ ಮೂರ್ತಿಯ ಮುಂದೆ ಸುಮಾರು ಅರ್ಧ ತಾಸು ನಾನು ಕುಳಿತಿದ್ದೆ. ಹೀಗೆ ಇಷ್ಟು ಸಮಯ ನಾನು ಯಾವ ಮೂರ್ತಿಯ ಮುಂದೆಯೂ ಕೂತಿದ್ದಿಲ್ಲ. ಆದರೆ ಈ ಅನುಭವ ಭಿನ್ನವಾಗಿತ್ತು.

ಸಾಮಾನ್ಯವಾಗಿ ಎಲ್ಲ ಮೂರ್ತಿ ಕೆತ್ತನೆಗಳನ್ನು ನಾನು ಶ್ಲಾಘಿಸುತ್ತೇನೆ. ಆದರೆ ಈ ಮೂರ್ತಿಯ ಕುಸುರಿ ಅದ್ಭುತ. ಇದು ಸಾಮಾನ್ಯವಲ್ಲ. ರಾಮನೆಂದರೆ ಹಾಗೆಯೇ ಎನಿಸುತ್ತದೆ. ಆತ ಕೇವಲ ಪೂಜಿಸಿಕೊಳ್ಳುವ ದೇವರು ಮಾತ್ರವಲ್ಲ, ನನ್ನ ಪ್ರಕಾರ ಆತ ಜೀವ ತಳೆದ ಕಲೆ. ಮೂರ್ತಿಯ ಶಿಲ್ಪ ಅರ್ಜುನ್ ಯೋಗಿರಾಜ್ ಜೀವಂತ ದಂತಕತೆ ಆತನನ್ನು ತಲೆಮಾರುಗಳು ನೆನಪಿಟ್ಟುಕೊಳ್ಳಲಿವೆ. ಈ ಹಿಂದೆ ನಾನು ಅರ್ಜುನ್​ರ ಅದ್ಭುತ ಕೆಲಸ ನೋಡಿದ್ದೇನೆ. ಅವರನ್ನು ಭೇಟಿಯಾಗಿ ಮೂರ್ತಿ ಕೆತ್ತುವಾಗಿನ ಅವರ ಅನುಭವವನ್ನು ಕೇಳಿ ತಿಳಿದುಕೊಳ್ಳಬೇಕು ಎಂದೆನಿಸಿದೆ’

‘ಕೆಲವು ವರ್ಷಗಳ ಹಿಂದೆ ಲಾಕ್​ಡೌನ್ ಸಂದರ್ಭದಲ್ಲಿ ಸುಮ್ಮನೆ ಲೆಕ್ಕ ಮಾಡುತ್ತಿದ್ದೆ. ನಾನು 504 ಚಂದ್ರಪರಿಭ್ರಮಣೆಗಳನ್ನು ಯಾವಾಗ ಪೂರೈಸುತ್ತೇನೆ ಎಂದು ಲೆಕ್ಕ ಹಾಕಿ ದಿನಾಂಕವನ್ನು ಗುರುತು ಹಾಕಿಕೊಂಡಿದ್ದೆ. ಆದರೆ ಕಾಲಾಂತರದಲ್ಲಿ ನಾನದನ್ನು ಮರೆತುಬಿಟ್ಟಿದ್ದೆ. ಕಾಕತಾಳೀಯ ಎಂಬಂತೆ ಆ ದಿನ ಕೃಷ್ಣ ಪಕ್ಷ ದಶಮಿ. ಸರಿಯಾಗಿ ಅದೇ ದಿನ ನಾನು ಪ್ರಯಾಗ್​ರಾಜ್​ನಲ್ಲಿದ್ದೆ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದೆ. ಕಾಶಿಗೆ ಭೇಟಿ ನೀಡಿದೆ. ಅದರ ಮರುದಿನವೇ ನನ್ನ ಹೊಸ ಸಿನಿಮಾಕ್ಕಾಗಿ ಅಯೋಧ್ಯೆಯ ಶ್ರೀರಾಮ ಪ್ರಭುವಿನ ಉತ್ಸವ ಮೂರ್ತಿಯ ಎದುರು ಸಂಕಲ್ಪ ಮಾಡಿದೆ. ಆ ಅನುಭವವನ್ನು ನನಗೆ ಮಾತಿನಲ್ಲಿ ವರ್ಣಿಸಲು ಅಸಾಧ್ಯ’

‘ಅದೇ ದಿನ ಹನುಮಂತ ದೇವಾಲಯಕ್ಕೆ ಭೇಟಿ ನೀಡಿದ್ದು ಅಭೂತಪೂರ್ವ ಅನುಭವ. ಅಲ್ಲಿನ ಟ್ರಸ್ಟಿಗಳು ನಮಗೆ ನೀಡಿದ ಸ್ವಾಗತಕ್ಕೆ ಧನ್ಯವಾದ. ವಿಶ್ವೇಶ್ವರಪ್ರಸನ್ನ ತೀರ್ಥರಿಗೆ ಹಾಗೂ ಮಹೇಶ್ ಠಾಕೂರ್ ಅವರಿಗೆ ವಿಶೇಷ ಧನ್ಯವಾದ. ನನ್ನ ಸಹೋದರ ರಂಜಿತ್, ಶ್ರೀನಿಶ್, ಸಂದೇಶ್ ಅಣ್ಣ, ದೇವಿ ಚರಣ್ ಕಾವ ಅವರುಗಳು ನಮ್ಮ ಈ ಪ್ರವಾಸವನ್ನು ಸುಂದರಗೊಳಿಸಿದರು. ಇದೊಂದು ಅದ್ಭುತವಾದ ಅನುಭವ. ಜೈ ಆಂಜನೇಯ, ಜೈ ಶ್ರೀರಾಮ್’. ಎಂದು ತಮ್ಮ ಖಾತೆಯಲ್ಲಿ ಶ್ರೀ ರಾಮನ ಬಗ್ಗೆ ಸುಧೀರ್ಘವಾಗಿ ಬರೆದುಕೊಂಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *