ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರಕ್ಕೆ ಇದುವರೆಗೂ ಬರೋಬ್ಬರಿ 5 ಸಾವಿರ ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿರೋ ಮಾಹಿತಿ ಬಿಡುಗಡೆಯಾಗಿದೆ.
ರಾಮಮಂದಿರ ನಿರ್ಮಾಣಕ್ಕೆ ಆರಂಭದಲ್ಲಿ ಟ್ರಸ್ಟ್ ಹಾಗೂ ಸಂಘ ಪರಿವಾರದ ಕಾರ್ಯಕರ್ತರಿಂದ ದೇಣಿಗೆ ಸಂಗ್ರಹಿಸಲಾಗಿತ್ತು. ಸ್ವಪ್ರೇರಣೆಯಿಂದ ರಾಮಭಕ್ತರು ಅಯೋಧ್ಯೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ದೇಣಿಗೆ ನೀಡುತ್ತಿದ್ದಾರೆ.
ರಾಮಕಥಾ ಖ್ಯಾತಿಯ ಮುರಾರಿ ಬಾಪು ಅವರೇ 11 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಮುರಾರಿ ಬಾಪು ಅನುಯಾಯಿಗಳಿಂದ 8 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿ ನೀಡಲಾಗಿದೆ. ಸೂರತ್ನ ವಜ್ರ ಉದ್ಯಮಿ ಗೋವಿಂದಭಾಯಿ ಡೋಲಾಕಿಯವರು ಸಹ 11 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಇದಿಷ್ಟೇ ಅಲ್ಲದೇ ಟಾಟಾ ಗ್ರೂಪ್, ಸೇರಿದಂತೆ ದೇಶದ ವಿವಿಧ ಖ್ಯಾತ ಉದ್ಯಮಿಗಳಿಂದಲೂ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲಾಗುತ್ತಿದೆ. ಪ್ರತಿ ತಿಂಗಳು ಸುಮಾರು 2.5 ಕೋಟಿ ರೂಪಾಯಿವರೆಗೂ ದೇಣಿಗೆ ಸಂಗ್ರಹವಾಗುತ್ತಿದೆ.
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ, ರಾಜ್ಯ ಸರ್ಕಾರದಿಂದ ಹಣ ಪಡೆದಿಲ್ಲ. ಭಕ್ತಾಧಿಗಳು ನೀಡಿರುವ ದೇಣಿಗೆ ಹಣದಿಂದಲೇ 3 ಎಕರೆ ಜಾಗದಲ್ಲಿ ಮುಖ್ಯ ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಉಳಿದ 67 ಎಕರೆ ಜಾಗದಲ್ಲಿ ವಿವಿಧ ದೇವಾಲಯ, ಭಕ್ತರಿಗೆ ಸೌಲಭ್ಯ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ.