ಮೈಸೂರು,ಡಿಸೆಂಬರ್,4,2024 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಬರೋಬ್ಬರಿ 8 ಬಾರಿ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ತನ್ನ ಹೆಗಲ ಮೇಲೆ ಹೊತ್ತು ಮೆರೆದಿದ್ದ ಅರ್ಜುನ ಆನೆ ಅಗಲಿ ಒಂದು ವರ್ಷವಾಗಿದ್ದು ಇಂದು ಅರ್ಜುನನಿಗೆ ಭಾವಪೂರ್ಣ ನಮನ ಸಲ್ಲಿಸಲಾಯಿತು.
ಮೈಸೂರು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ನಗರದ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ನಲ್ಲಿ ‘ಅರ್ಜುನ ಮರೆವುದೆಂತು ನಿನ್ನ’ ಎಂಬ ಹೆಸರಿನಲ್ಲಿ ಅರ್ಜುನನ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅರ್ಜುನ ಆನೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಅಗಲಿದ ಅರ್ಜುನನಿಗೆ ಭಾವಪೂರ್ಣ ನಮನ ಸಲ್ಲಿಸಲಾಯಿತು. ಇದೇ ವೇಳೆ ಪಶುವೈದ್ಯಾಧಿಕಾರಿ ಡಾ. ನಾಗರಾಜ್ ಅವರು ಅರ್ಜುನ ಆನೆಯ ಹಿನ್ನೆಲೆ ಸ್ವಭಾವ, ಧೈರ್ಯ, ಶೌರ್ಯದ ಕುರಿತು ನೆನಪುಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ಗಣ್ಯರು ಹಾಗೂ ಅಭಿಮಾನಿಗಳು ಸರ್ಕಾರಕ್ಕೆ ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಅರಣ್ಯಾಧಿಕಾರಿ ಟಿ ಬಾಲಚಂದ್ರ, ಕಸಾಪ ಅಧ್ಯಕ್ಷ ಕೆ.ಎಸ್ ಶಿವರಾಮು, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಐತಿಚಂಡ ರಮೇಶ್ ಉತ್ತಪ್ಪ, ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎ ಪಿ ನಾಗೇಶ್, ಅರ್ಜುನ ಮಾವುತ ಸಣ್ಣಪ್ಪ ಸೇರಿದಂತೆ ಅರ್ಜುನನ ಅಭಿಮಾನಿಗಳು ಭಾಗಿಯಾಗಿದ್ದರು.
Key words: Arjuna, Elephant, Remembrance, heartfelt tribute, mysore