ಅ. 26, 27ಕ್ಕೆ ಬ್ರಹ್ಮಾವರದಲ್ಲಿ ‘ಕೃಷಿ ಮೇಳ-2024’

ಉಡುಪಿ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಶಿವಮೊಗ್ಗ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಹಾಗೂ ವಿವಿಧ ಇಲಾಖೆ, ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ “ಕೃಷಿ ಮೇಳ-2024″ ಅನ್ನು ಇದೇ ಅ. 26 ಮತ್ತು 27ರಂದು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಧನಂಜಯ ಬಿ. ತಿಳಿಸಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅ.26ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಕೃಷಿ ಮೇಳವನ್ನು ಉದ್ಘಾಟಿಸಲಿದ್ದಾರೆ. ಉದ್ಯಮಿ ಆನಂದ ಸಿ. ಕುಂದರ್ ಕೃಷಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಸಿ. ಜಗದೀಶ್, ಕೃಷಿ ವಿಸ್ತರಣಾ ನಿರ್ದೇಶಕ ಡಾ. ಕೆ.ಟಿ. ಗುರುಮೂರ್ತಿ, ಸಂಶೋಧನಾ ನಿರ್ದೇಶಕ ಡಾ. ಬಿ.ಎಂ. ದುಶ್ಯಂತ ಕುಮಾರ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಮೊದಲ ದಿನ ಮಧ್ಯಾಹ್ನ 2 ಗಂಟೆಯಿಂದ ಅಡಿಕೆ ಆಧಾರಿತ ಕೃಷಿ” ಮತ್ತು “ಜೇನು ಕೃಷಿ” ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಎರಡನೇ ದಿನ ಬೆಳಿಗ್ಗೆ 10ಗಂಟೆಗೆ “ವಿಕಸಿತ ಕೃಷಿಯಲ್ಲಿ ಕೃಷಿ ಮತ್ತು ಪಶು ಸಖಿಯರು” ಮತ್ತು ಮಧ್ಯಾಹ್ನ 2 ಗಂಟೆಗೆ “ಅಡಿಕೆ ಮತ್ತು ಹಲಸಿನಲ್ಲಿ ಮೌಲ್ಯವರ್ಧನೆ” ಎಂಬ ವಿಷಯದ ಕುರಿತ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಕೃಷಿ ಮೇಳದಲ್ಲಿ 200ಕ್ಕೂ ಅಧಿಕ ಮಳಿಗೆಗಳಿದ್ದು, ಅದರಲ್ಲಿ ವಿವಿಧ ಇಲಾಖೆ, ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಿಂದ ಅಭಿವೃದ್ಧಿ ಪಡಿಸಿರುವ ಕೃಷಿ ತಂತ್ರಜ್ಞಾನಗಳ ಮತ್ತು ಕೃಷಿ ಪರಿಕರಗಳ ವಸ್ತು ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಪ್ರಧಾನ ಸಂಶೋಧಕ ಡಾ. ಕೆ.ವಿ. ಸುಧೀರ್ ಕಾಮತ್, ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ಎಂ. ಶಂಕರ್, ಬ್ರಹ್ಮಾವರ ಡಿಪ್ಲೋಮಾ ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಲಕ್ಷಣ್ ಇದ್ದರು.

 

Font Awesome Icons

Leave a Reply

Your email address will not be published. Required fields are marked *