ನವದೆಹಲಿ: ತಿರುಪತಿಯಲ್ಲಿ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿದೆ ಎಂಬ ಆಂಧ್ರಪ್ರದೇಶದ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರ ಆರೋಪದ ಕುರಿತು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಅವರಿಗೆ ವಿವರವಾದ ವರದಿ ಕೇಳಿದ್ದಾರೆ.
ಲಡ್ಡುಗಳನ್ನು ದೇವಾಲಯಕ್ಕೆ ಭೇಟಿ ನೀಡುವ ಕೋಟಿಗಟ್ಟಲೆ ಭಕ್ತರಿಗೆ ನೀಡಲಾಗುತ್ತದೆ. ಇದರಿಂದಾಗಿ ಸಿಎಂ ಏನೇ ಹೇಳಿದರೂ ಅದು ಗಂಭೀರ ಮತ್ತು ಕಳವಳಕಾರಿ ವಿಷಯವಾಗಿದೆ. ಈ ಆರೋಪದ ವಿರುದ್ಧ ಕೂಲಂಕುಷ ತನಿಖೆ ನಡೆಸುವ ಅಗತ್ಯವಿದೆ. ಅಲ್ಲದೇ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ನಡ್ಡಾ ಹೇಳಿದ್ದಾರೆ.
ಚಂದ್ರಬಾಬು ನಾಯ್ಡು ಅವರು, ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಅಧಿಕಾರದಲ್ಲಿದ್ದಾಗ ತಿರುಪತಿ ಲಡ್ಡು ತಯಾರಿಕೆಗೆ ಬಳಸಿದ ತುಪ್ಪದ ಮಾದರಿಗಳಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿದೆ ಎಂದು ಆರೋಪಿಸಿದ್ದರು. ಅಲ್ಲದೇ ಈ ಬಗ್ಗೆ ಗುಜರಾತ್ನ ಸರ್ಕಾರಿ ಲ್ಯಾಬ್ನ ವರದಿಯನ್ನು ಅವರು ಉಲ್ಲೇಖಿಸಿದ್ದರು.
ಈ ವಿಚಾರವಾಗಿ ನಾಲ್ಕು ವರ್ಷಗಳ ಕಾಲ ಟಿಟಿಡಿಯ ಅಧ್ಯಕ್ಷರಾಗಿದ್ದ ರಾಜ್ಯಸಭಾ ಸಂಸದ ವೈವಿ ಸುಬ್ಬಾ ರೆಡ್ಡಿಯವರು, ದೇವರಿಗೆ ಪ್ರತಿನಿತ್ಯ ಅರ್ಪಿಸುವ ನೈವೇದ್ಯ ಮತ್ತು ಭಕ್ತರಿಗೆ ನೀಡುವ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಹೇಳುವುದು ಹೇಯ ಕೃತ್ಯ ಎಂದು ಆಂಧ್ರ ಸಿಎಂಗೆ ಎಕ್ಸ್ನಲ್ಲಿ ತಿರುಗೇಟು ನೀಡಿದ್ದಾರೆ.
ಆಂಧ್ರಪ್ರದೇಶದ ಕಾಂಗ್ರೆಸ್ನ ರಾಜ್ಯ ಘಟಕದ ಮುಖ್ಯಸ್ಥೆ ವೈಎಸ್ ಶರ್ಮಿಳಾ ಅವರು, ನಿಮ್ಮ ಆರೋಪಗಳಲ್ಲಿ ಯಾವುದೇ ರಾಜಕೀಯ ಕೋನಗಳಿಲ್ಲದಿದ್ದರೆ, ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಅಥವಾ ಸಿಬಿಐ ತನಿಖೆಗೆ ವಹಿಸಿ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.