ಗುಂಡ್ಲುಪೇಟೆ: ಒಂಟಿ ಆನೆಯ ಉಪಟಳದಿಂದ ಬೇಸತ್ತಿದ್ದ ಹಂಗಳ ಗ್ರಾಮದ ರೈತರು ನೆರೆ ರಾಜ್ಯದ ಅರಣ್ಯ ಸಚಿವರ ಜೊತೆ ಸಮನ್ವಯ ಸಮಿತಿ ಜಂಟಿ ಸಭೆಗೆ ಆಗಮಿಸಿದ್ದ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರಿಗೆ ಆನೆ ಸೆರೆಹಿಡಿಯುವಂತೆ ಮನವಿ ಸಲ್ಲಿಸಿದರು.
ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಸ್ವಾಗತ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಕರ್ನಾಟಕ ಕೇರಳ ತಮಿಳುನಾಡು ಅರಣ್ಯ ಇಲಾಖೆ ಸಚಿವರ ಮಟ್ಟದ ಸಮನ್ವಯ ಸಮಿತಿ ಸಭೆ ಬಳಿಕ ಖಂಡ್ರೆ ಅವರ ಭೇಟಿಗೆ ಕಾಯ್ದಿದ್ದ ಹಂಗಳ ಗ್ರಾಮದ ರೈತರು ಆನೆ ಉಪಟಳ ದಿನೇ ದಿನೇ ಹೆಚ್ಚುತ್ತಿದೆ ರೈತರ ಜಮೀನಿಗೆ ಲಗ್ಗೆ ಹಿಡುವ ಒಂಟಿಯಾನೆ ಫಸಲನ್ನ ನಾಶಪಡಿಸುತ್ತಿದೆ. ಈ ವಿಚಾರವಾಗಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ , ರೈತರ ಬಗ್ಗೆ ನಿರ್ಲಕ್ಷ್ಯತೆ ತೋರುತ್ತಿದ್ದಾರೆ ಎಂದು ಸಚಿವರಿಗೆ ದೂರಿದರು.
ಸಚಿವ ಈಶ್ವರ್ ಖಂಡ್ರೆ ಸಮ್ಮುಖದಲ್ಲೇ ರೈತರು ಮತ್ತು ಅರಣ್ಯಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು, ರೈತರ ಸಮಸ್ಯೆಯನ್ನ ಆಲಿಸಿದ ಸಚಿವ ಶೀಘ್ರದಲ್ಲೇ ಒಂಟಿ ಸಲಗವನ್ನ ಸೆರೆಹಿಡಿದು ಬೇರೆಡೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಿ ಎಂದು ಸಿಎಫ್ ರಮೇಶ್ ಕುಮಾರ್ ಅವರಿಗೆ ಸೂಚನೆ ನೀಡಿದರು. ಒಂಟಿಯಾನೆ ಸೆರೆಹಿಡಿದು ಸ್ಥಳಾಂತರ ಮಾಡದಿದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಂದು ಸಚಿವ ಈಶ್ವರ್ ಬಿ ಖಂಡ್ರೆ ಭರವಸೆ ನೀಡಿದರು.