ಆರೋಗ್ಯ ಕೇಂದ್ರದಲ್ಲಿ ಪಂಚಾಯಿತಿ ಕಚೇರಿ; ಹೊಸ ಕಟ್ಟಡದ ಬೇಡಿಕೆ

ಬೀದರ್: ಯರನಳ್ಳಿ ಗ್ರಾಮ ಪಂಚಾಯಿತಿಗೆ ಕಟ್ಟಡದ ಕೊರತೆ ಇದ್ದು, ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರವೇ ಆಸರೆಯಾಗಿದೆ. ಇಲ್ಲಿಯೇ ಪಂಚಾಯಿತಿ ಕಚೇರಿಯ ಕೆಲಸ ಕಾರ್ಯಗಳು ನಡೆಯುತ್ತಿವೆ.

ಕಟ್ಟಡ ಬಿದ್ದು ಹೋಗಿರುವ ಕಾರಣ ಪಂಚಾಯಿತಿ ಕಚೇರಿ ಮೂರು ವರ್ಷಗಳಿಂದ ಆರೋಗ್ಯ ಕೇಂದ್ರದಲ್ಲೇ ನಡೆಯುತ್ತಿದೆ.

ಸದ್ಯ ಗ್ರಾಮದಿಂದ ಅರ್ಧ ಕಿ.ಮೀ. ದೂರದ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಸಾರ್ವಜನಿಕರು ವಿವಿಧ ಕೆಲಸ ಕಾರ್ಯಗಳಿಗೆ ಪಂಚಾಯಿತಿಗೆ ತೆರಳಲು ತೊಂದರೆ ಅನುಭವಿಸಬೇಕಾಗಿದೆ.

‘ಆರೋಗ್ಯ ಮತ್ತು ಯೋಗ ಕ್ಷೇಮ ಕೇಂದ್ರದಲ್ಲಿ ಮೂರು ಕಿರಿದಾದ ಕೋಣೆಗಳಿವೆ. ಅವುಗಳಲ್ಲೇ ಸಾಮಾನ್ಯ ಸಭೆ, ಪಂಚಾಯಿತಿಯ ಎಲ್ಲ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಪಂಚಾಯಿತಿಯ ಹಳೆಯ ಕಟ್ಟಡ ಬಿದ್ದಿದೆ. ಹೀಗಾಗಿ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರದಲ್ಲಿ ಕಚೇರಿ ನಡೆಸಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಸಿನಾ ಬೇಗಂ ಅಬ್ಬಾಸ್ ಖಾನ್’ ತಿಳಿಸುತ್ತಾರೆ.

‘ಸರ್ಕಾರ ಹೊಸ ಕಟ್ಟಡ ನಿರ್ಮಿಸಿದರೆ ಪಂಚಾಯಿತಿ ಕೆಲಸ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಲು ಅನುಕೂಲವಾಲಿದೆ. ಜನರಿಗೆ ಅರ್ಧ ಕಿ.ಮೀ. ದೂರ ಅಲೆದಾಡುವುದೂ ತಪ್ಪಲಿದೆ’ ಎಂದರು.

ಸದ್ಯ ಪಂಚಾಯಿತಿ ಕಚೇರಿ ಊರ ಹೊರಗೆ ಇರುವುದರಿಂದ ಸಾರ್ವಜನಿಕರಿಗೆ ಮನೆ, ನಲ್ಲಿ ಕರ ಪಾವತಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾಬ್ ಕಾರ್ಡ್, ಸರ್ಕಾರದ ಯೋಜನೆಗಳು ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ಅನಾನುಕೂಲವಾಗುತ್ತಿದೆ. ಹಳೆಯ ಕಟ್ಟಡ ನೆಲಸಮಗೊಳಿಸಿ, ಅದೇ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಿದರೆ ಒಳಿತು ಎನ್ನುತ್ತಾರೆ ಗ್ರಾಮದ ಕಲ್ಲಪ್ಪ ಹಾಸಗೊಂಡ.

ಯರನಳ್ಳಿ ಗ್ರಾಮ ಪಂಚಾಯಿತಿಯು ಯರನಳ್ಳಿ, ಇಸ್ಲಾಂಪುರ, ಬಂಪಳ್ಳಿ, ಸಾಂಗ್ವಿ ಹಾಗೂ ಸಿದ್ಧಾಪುರ ಗ್ರಾಮಗಳನ್ನು ಒಳಗೊಂಡಿದ್ದು, ಒಟ್ಟು ಸದಸ್ಯ ಬಲ 14.

Font Awesome Icons

Leave a Reply

Your email address will not be published. Required fields are marked *