ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಇಂದು (ಫೆ.25) ಗುಜರಾತ್ ಪ್ರವಾಸ ಕೈಗೊಂಡಿದ್ದು, ದೇಶದ ಅತೀ ಉದ್ದದ ಕೇಬಲ್ ತೂಗು ಸೇತುವೆ ʻಸುದರ್ಶನ ಸೇತುʼವನ್ನು ಉದ್ಘಾಟಿಸಲಿದ್ದಾರೆ.
ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಗುಜರಾತ್ನ ಓಖಾ ಮುಖ್ಯ ಭೂಭಾಗ ಮತ್ತು ಬೇಟ್ ದ್ವಾರಕಾ ದ್ವೀಪವನ್ನು ಸಂಪರ್ಕಿಸುವ ಅತೀ ಉದ್ದದ ಕೇಬಲ್ ತೂಗು ಸೇತುವೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಇಂದು ಬೆಳಗ್ಗೆ 8:25ಕ್ಕೆ ಸುದರ್ಶನ ಸೇತುಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಬೇಟ್ ದ್ವಾರಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬೆಳಗ್ಗೆ 9:30ಕ್ಕೆ ದ್ವಾರಕಾಧೀಶ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಸೇತುವೆ ಉದ್ಘಾಟನೆ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿರುವ ಮೋದಿ ಜಾಮ್ನಗರ, ದೇವಭೂಮಿ ದ್ವಾರಕಾ ಮತ್ತು ಪೋರಬಂದರ್ ಜಿಲ್ಲೆಗಳಲ್ಲಿಯೂ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ರಾಜ್ಕೋಟ್ನಲ್ಲಿ ಗುಜರಾತ್ನ ಮೊದಲ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್), ರಾಜ್ಕೋಟ್ ನಗರದ ಹೊರವಲಯದಲ್ಲಿರುವ ಪಾರಾ ಪಿಪಾಲಿಯಾ ಗ್ರಾಮದ ಬಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಒಳರೋಗಿಗಳ ವಿಭಾಗವನ್ನೂ (ಐಪಿಡಿ) ಮೋದಿ ಉದ್ಘಾಟಿಸಲಿದ್ದಾರೆ ಎಂದು ಪಟೇಲ್ ತಿಳಿಸಿದ್ದಾರೆ.