ಬೀದರ್: ‘ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕರ್ನಾಟಕ ಸಂಭ್ರಮ-50 ರಥಯಾತ್ರೆ ಸಂಚರಿಸುತ್ತಿದ್ದು, ಜ.19ರಂದು ನಗರಕ್ಕೆ ಆಗಮಿಸಲಿದೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.
ನಗರದಲ್ಲಿ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆ ಯಶಸ್ವಿಗೊಳಿಸಲು ವಿವಿಧ ಶಾಲಾ ಕಾಲೇಜಿನ ಮುಖ್ಯಶಿಕ್ಷಕರು ಮತ್ತು ಪ್ರಾಂಶುಪಾಲರೊಂದಿಗೆ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಅವರು ತಿಳಿಸಿದರು.
ರಥಯಾತ್ರೆಯು ಮಧ್ಯಾಹ್ನ 3 ಗಂಟೆಗೆ ನಗರದ ಮೈಲೂರ್ ಕ್ರಾಸ್ನಿಂದ ಜಿಲ್ಲಾ ನೆಹರೂ ಕ್ರೀಡಾಂಗಣದವರೆಗೆ ನಡೆಯಲಿದೆ. 1ಕಿ.ಮೀ. ಉದ್ದದ ಕನ್ನಡ ಧ್ವಜ ಮೆರವಣಿಗೆ ಪ್ರಮುಖ ಆಕರ್ಷಣೆಯಾಗಿರಲಿದೆ. ಬೊಮ್ಮಗೊಂಡೇಶ್ವರ ವೃತ್ತ, ಭಗತಸಿಂಗ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಜನರಲ್ ಕರಿಯಪ್ಪ ವೃತ್ತದಿಂದ ಜಿಲ್ಲಾ ನೆಹರೂ ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಯಲಿದೆ. ಬಳಿಕ ಕ್ರೀಡಾಂಗಣದಲ್ಲಿ ಶ್ವಾನ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ 6.15ಕ್ಕೆ ಪೊಲೀಸ್ ಇಲಾಖೆಯಿಂದ ಆಕರ್ಷಕ ಪಂಜಿನ ಕವಾಯತು ನಡೆಯಲಿದೆ. ಶಾಲಾ-ಕಾಲೇಜಿನ ಮಕ್ಕಳು, ಕನ್ನಡಪರ ಸಂಘಟನೆಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ದಿಲೀಪ ಬದೋಲೆ, ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.