ಇದು ರೈತರನ್ನು ಕಡೆಗಣಿಸಿದ ಬಜೆಟ್: ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್

ಬೀದರ್: ಸಿದ್ದರಾಮಯ್ಯರವರ ನೇತೃತ್ವದ ಈ ಸರ್ಕಾರದ ಮೇಲೆ ರಾಜ್ಯದ ರೈತರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೇ ಈ ಬಜೆಟ್ ನಲ್ಲಿ ರೈತರನ್ನ ಕಡೆಗಣಿಸಲಾಗಿದೆ. ಇದು ಸಂಪೂರ್ಣವಾಗಿ ರೈತರನ್ನ ಕಡೆಗಣಿಸಿದ ಬಜೆಟ್ ಆಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ವಾಡಿಕೆಯಂತೆ ಮಳೆಯಾಗದ ಕಾರಣದಿಂದಾಗಿ ಬಿತ್ತನೆ ಮಾಡಿದ ಬೆಳೆಗಳನ್ನು ಕಳೆದುಕೊಂಡಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಾಗಿದ್ದ ಸರ್ಕಾರ ಇದುವರೆಗೂ ಸೂಕ್ತವಾದ ಬರ ಪರಿಹಾರವನ್ನು ನೀಡಿಲ್ಲ.

ಬಜೆಟ್ ನಲ್ಲಿ ಆದರೂ ಕೃಷಿ ಕ್ಷೇತ್ರಕ್ಕೆ ಉತ್ತಮ ಯೋಜನೆ ರೂಪಿಸುತ್ತಾರೆ. ಆ ಮೂಲಕ ರಾಜ್ಯ ಸರ್ಕಾರದವರು ನಮ್ಮ ಕೈ ಹಿಡಿಯುತ್ತಾರೆ ಎಂದು ನಂಬಿಕೊಂಡು ಕುಳಿತಿದ್ದ ಅನ್ನದಾತರ ನಿರೀಕ್ಷೆಯನ್ನು ರಾಜ್ಯ ಸರ್ಕಾರ ಹುಸಿಗೊಳಿಸಿದೆ. ರೈತರೇ ದೇಶದ ಬೆನ್ನೆಲುಬು ಎಂದು ಬರಿ ಬಾಯಿ ಮಾತಿನಿಂದ ಹೇಳಿದರೆ ಸಾಕಾಗುತ್ತಾ ಎಂದು ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ಬಂಡೆಪ್ಪ ಖಾಶೆಂಪುರ್ ರವರು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಯಾವುದೇ ಗ್ಯಾರಂಟಿ ಯೋಜನೆ ನೀಡಿಲ್ಲ:
ಗ್ಯಾರಂಟಿ ಯೋಜನೆಗಳ ಮಧ್ಯದಲ್ಲಿ ರೈತರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಕುಳಿತಿದ್ದರು. ರೈತರ ಸಾಲಮನ್ನಾ ಮಾಡಬೇಕು. ಬೆಂಬಲ ಬೆಲೆ ನೀಡಬೇಕು ಎಂಬುದು ರೈತರ ಒತ್ತಾಯವಾಗಿತ್ತು. ಈ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ರೈತರಿಗೆ ಯಾವುದೇ ಯೋಜನೆ ರೂಪಿಸಿಲ್ಲ.

ಬರಗಾಲ ಬಂದಿದೆ. ರೈತರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಆಗಿದೆ. ರೈತರಿಗೆ ಧೈರ್ಯ ತುಂಬುವ ಯಾವುದೇ ಯೋಜನೆ ಕೂಡ ಈ ಬಜೆಟ್ ನಲ್ಲಿ ಇಲ್ಲ. ಮಹತ್ವದ ನೀರಾವರಿ ಯೋಜನೆಗಳು ಕೂಡ ಇಲ್ಲ. ಈ ಸರ್ಕಾರ ಸಾಲಮನ್ನಾವಂತು ಮಾಡಿಲ್ಲ. ಕೊನೆ ಪಕ್ಷ ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರವನ್ನಾದರು ನೀಡಬೇಕಾಗಿತ್ತು. ಆದರೆ ಆ ಕೆಲಸವನ್ನು ಈ ಸರ್ಕಾರ ಮಾಡಿಲ್ಲ ಎಂದು ಬಂಡೆಪ್ಪ ಖಾಶೆಂಪುರ್ ರವರು ಆರೋಪಿಸಿದರು.

ಬೀದರ್ ಜಿಲ್ಲೆಗೂ ವಿಶೇಷ ಪ್ಯಾಕೇಜ್ ಏನು ಇಲ್ಲ:
ಬೀದರ್ ಹಿಂದುಳಿದ ಪ್ರದೇಶವಾಗಿದೆ. ಯಾವುದೇ ವಿಶೇಷ ಪ್ಯಾಕೇಜ್ ಬೀದರ್ ಜಿಲ್ಲೆಗೆ ನೀಡಿಲ್ಲ. ಬೀದರ್ ಜಿಲ್ಲೆಯನ್ನು ಈ ಬಜೆಟ್ ನಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಇದು ನಮ್ಮ ಜಿಲ್ಲೆಗೆ ಮಾಡಿದ ಅನ್ಯಾಯವಾಗಿದೆ ಎಂದು ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

Font Awesome Icons

Leave a Reply

Your email address will not be published. Required fields are marked *