ಇರಾನ್ ದೂತಾವಾಸ ಕಚೇರಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ

ಡಮಾಸ್ಕಸ್: ಸಿರಿಯಾದಲ್ಲಿರುವ  ಇರಾನ್ ದೂತಾವಾಸ ಕಚೇರಿ ಮೇಲೆ ಇಸ್ರೇಲ್  ವೈಮಾನಿಕ ದಾಳಿ ನಡೆಯಿಸದೆ.

ಈ ದಾಳಿಯಲ್ಲಿ ಕನಿಷ್ಠ 11 ಜನರು ಮೃತಪಟ್ಟಿದ್ದಾರೆ. ಮೃತರಲ್ಲಿ ಎಂಟು ಇರಾನಿಯನ್ನರು, ಇಬ್ಬರು ಸಿರಿಯನ್ನರು ಮತ್ತು ಒಬ್ಬ ಲೆಬನೀಸ್ ಸೇರಿದ್ದಾರೆ. ಅವರೆಲ್ಲರೂ ಹೋರಾಟಗಾರರು. ನಾಗರಿಕರು ಯಾರೂ ಮೃತಪಟ್ಟಿಲ್ಲ ಎಂದು ಸಿರಿಯಾದಲ್ಲಿನ ಮೂಲಗಳು ತಿಳಿಸಿವೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ರೆಜಾ ಜಹೇದಿ ಮತ್ತು ಇನ್ನೊಬ್ಬ ಉನ್ನತ ಶ್ರೇಣಿಯ ಅಧಿಕಾರಿ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ಹಾದಿ ಹಾಜಿ ರಹೀಮಿ ಹಾಗೂ ಏಳು ಮಂದಿ ಸದಸ್ಯರು ಕೂಡ ಹತ್ಯೆಯಾದವರಲ್ಲಿ ಸೇರಿದ್ದಾರೆ.

ಈ ಕೃತ್ಯವು ಸಿರಿಯಾದಲ್ಲಿರುವ ಇರಾನ್‌ನ ಮಿಲಿಟರಿ ಅಧಿಕಾರಿಗಳನ್ನು ಗುರಿಯಾಗಿಸುವ ಸಂಬಂಧ ಇಸ್ರೇಲ್‌ನಿಂದ ಸ್ಪಷ್ಟ ಸಂದೇಶವಾಗಿದೆ ಎನ್ನಲಾಗಿದೆ.

ಸಿರಿಯಾದ ವಿದೇಶಾಂಗ ಸಚಿವ ಫೈಸಲ್ ಮೆಕ್ದಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮಾತನಾಡಿ, ದಾಳಿಯನ್ನು ಖಂಡಿಸಿದರು. ಇದು ಘೋರ ಭಯೋತ್ಪಾದಕ ದಾಳಿ. ಹಲವಾರು ಮುಗ್ಧ ಜನರನ್ನು ಕೊಲ್ಲಲಾಗಿದೆ ಎಂದು ಅವರು ಹೇಳಿದ್ದಾರೆ.

ಇರಾನ್ ಮತ್ತು ಆ ದೇಶದ ಮಿಲಿಟರಿ ಅಧಿಕಾರಿಗಳು ಇಸ್ರೇಲ್ ವಿರುದ್ಧ ಗಾಜಾದಲ್ಲಿ ಮತ್ತು ಲೆಬನಾನ್ ಗಡಿಯಲ್ಲಿ ಹೋರಾಡುತ್ತಿರುವ ಉಗ್ರಗಾಮಿ ಗುಂಪುಗಳನ್ನು ಬೆಂಬಲಿಸುವುದಕ್ಕೆ ಇಸ್ರೇಲ್ ಆಕ್ಷೇಪ ವ್ಯಕ್ತಪಡಿಸುತ್ತಿದೆ.

ದಾಳಿಯ ಬಗ್ಗೆ ಇಸ್ರೇಲ್ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಇಸ್ರೇಲ್ ಹೇಳಿದೆ. ದಾಳಿಗೆ ಕಠಿಣ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಹೇಳಿದೆ. ಇದು ಇಸ್ರೇಲ್ ಮತ್ತು ಇರಾನ್‌ನ ಮಿತ್ರರಾಷ್ಟ್ರಗಳ ನಡುವೆ ಇನ್ನೂ ಹೆಚ್ಚಿನ ಹಿಂಸಾತ್ಮಕ ದಾಳಿಗಳು ನಡೆಯುವ ಮುನ್ಸೂಚನೆ ನೀಡಿವೆ.

Font Awesome Icons

Leave a Reply

Your email address will not be published. Required fields are marked *