ಉಗುರಿನ ಸೌಂದರ್ಯ ಕಾಪಾಡಿಕೊಳ್ಳುವುದು ಹೇಗೆ? – News Kannada (ನ್ಯೂಸ್ ಕನ್ನಡ)

ಈಗ ಯುವತಿಯರು, ಮಹಿಳೆಯರೆಲ್ಲರೂ ಉಗುರಿನ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ಅದರ ಕಾಳಜಿ ಮಾಡುತ್ತಾರೆ. ಉಗುರಿನ ಬಗ್ಗೆ ಕಾಳಜಿ ವಹಿಸುವುದರೊಂದಿಗೆ ತಾವು ಧರಿಸುವ ಉಡುಗೆಗೆ ಹೊಂದಿಕೆಯಾಗುವಂತಹ ಬಣ್ಣವನ್ನು ಉಗುರಿಗೆ ಹಚ್ಚಿ ಗಮನಸೆಳೆಯುತ್ತಾರೆ.

ಇಷ್ಟಕ್ಕೂ ಉಗುರಿನ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಹೆಣ್ಮಕ್ಕಳಿಗೆ ಸುಲಭವಾಗಿ ಉಳಿದಿಲ್ಲ. ಪ್ರತಿನಿತ್ಯವೂ ತಮ್ಮದೇ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಸಂದರ್ಭ ಉಗುರಿಗೆ ಘಾಸಿಯಾಗುವ ಸಾಧ್ಯತೆಗಳಿರುತ್ತವೆ. ಜತೆಗೆ ಮನೆಯ ಕೆಲಸಗಳನ್ನು ಮಾಡುವ ಸಂದರ್ಭದಲ್ಲಿ ತೊಂದರೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿಯೂ ಉಗುರಿನತ್ತ ಹೆಚ್ಚಿನ ಆಸಕ್ತಿ ವಹಿಸಿ ಅದನ್ನು ಕಾಪಾಡಿಕೊಳ್ಳುವುದು ಸುಲಭದ ಕೆಲಸವೇನಲ್ಲ.

ಹಾಗೆನೋಡಿದರೆ  ಪ್ರತಿಯೊಬ್ಬ ಮಹಿಳೆ ತನ್ನ ದೇಹವನ್ನು ಸುಂದರವಾಗಿಟ್ಟುಕೊಳ್ಳಬೇಕೆಂಬ ಹಂಬಲ ಹೊಂದಿರುತ್ತಾಳೆ. ಕೇವಲ ಹಂಬಲದಿಂದಷ್ಟೆ ಸೌಂದರ್ಯ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಶರೀರದ ಪ್ರತಿಯೊಂದು ಅಂಗಗಳ ಬಗ್ಗೆಯೂ ಕಾಳಜಿವಹಿಸುವುದು ಅಗತ್ಯ. ಹೆಚ್ಚಿನ ಮಹಿಳೆಯರು ತಮ್ಮ ಉಗುರಿನತ್ತ ಹೆಚ್ಚಿನ ಕಾಳಜಿ ವಹಿಸುತ್ತಾರೆ. ತಾವು ಸುಂದರವಾಗಿದ್ದು ಉಗುರು ಕೆಟ್ಟದಾಗಿದ್ದರೆ ಜನ ನಗುತ್ತಾರೆ. ಅಥವಾ ಉಗುರಿನತ್ತ ದೃಷ್ಠಿ ಹರಿಸಿ ಮೂತಿ ತಿರುಗಿಸುತ್ತಾರೆ. ಹೀಗಿರುವಾಗ ಉಗುರನ್ನು ಹೇಗೆ ಕಾಪಾಡಿಕೊಳ್ಳಬೇಕು ಮತ್ತು ಹೇಗಿಟ್ಟುಕೊಂಡರೆ ಆಕರ್ಷಕವಾಗಿ ಕಾಣಬಹುದು ಎಂಬುದರ ಬಗ್ಗೆಯೂ ಚಿಂತೆ ಮಾಡುತ್ತಿರುತ್ತಾರೆ.

ಸಾಮಾನ್ಯವಾಗಿ ವಿವಿಧ ಕೆಲಸಗಳನ್ನು ಅದರಲ್ಲೂ ಮನೆಕೆಲಸ ಮಾಡುವ, ಕಠಿಣ ಶ್ರಮದ ಕೆಲಸ ನಿರ್ವಹಿಸುವವರಿಗೆ ಉಗುರಿನ ಸೌಂದರ್ಯ ಕಾಪಾಡಿಕೊಳ್ಳುವುದು ಕಷ್ಟದ ಕೆಲಸವೇ. ಏಕೆಂದರೆ ಈ ವೇಳೆ ಉಗುರು ಕಳಾಹೀನವಾಗಿ ಮುಜುಗರ ತರಬಹುದು.  ಆದ್ದರಿಂದ  ಮಹಿಳೆಯರು ತಮ್ಮ ಉಗುರಿನ ಸೌಂದರ್ಯವನ್ನು ಉಳಿಸಬೇಕೆಂದರೆ ಪಾತ್ರೆ ತೊಳೆಯುವ ವೇಳೆ ಹಾಗೂ ಬಟ್ಟೆ ಒಗೆಯುವ ವೇಳೆ ಕೈಗೆ ಗ್ಲೌಸ್ ಧರಿಸುವುದು ಒಳ್ಳೆಯದು.

ಉಗುರಿನ ಸೌಂದರ್ಯವನ್ನು ಉಗುರು ಸುತ್ತಿನ ಚರ್ಮ ಮತ್ತಷ್ಟು ಹಾಳು ಮಾಡುತ್ತದೆ. ಒಂದು ವೇಳೆ ಪೆಡಿಕ್ಯೂರ್  ಅಥವಾ ಮೆನಿಕ್ಯೂರ್ ಮಾಡಿಸುವವರು ಉಗುರು ಸುತ್ತಿನ ಚರ್ಮವನ್ನು ಕೀಳಿಸುವುದನ್ನು ಬಿಟ್ಟುಬಿಡಿ. ಇಂತಹ ಚರ್ಮವನ್ನು ಕತ್ತರಿಸುವುದಕ್ಕಿಂತ ರಿಮೂವರ್ ಜೆಟ್ ಸಹಾಯದಿಂದ ತೆಗೆಯುವುದು ಒಳ್ಳೆಯದು. ಉಗುರನ್ನು ಕತ್ತರಿಸುವಾಗ ಹೇಗೇಗೋ ಕತ್ತರಿಸದೆ ಕ್ರಮಬದ್ಧತೆಯಿಂದ ಕತ್ತರಿಸಿ. ಇದರಿಂದ ಆಕರ್ಷಕ ಕಾಣುವುದಲ್ಲದೆ, ಉಗುರಿನ ಬೆಳವಣಿಗೆಗೂ ಸಹಾಯ ಮಾಡುತ್ತದೆ.

ನೇಲ್ ಪಾಲಿಸ್ ಕೆಲವು ದಿನಗಳ ನಂತರ ಅಲ್ಲಲ್ಲಿ ಕಿತ್ತು ಬರುತ್ತದೆ. ಆಗ ಅದನ್ನು ತೆಗೆದು  ಮತ್ತೊಮ್ಮೆ ಹಚ್ಚಬೇಕು.  ಅದರ ಮೇಲೇಯೇ ಹಚ್ಚಬಾರದು. ಉಗುರಿಗೆ ಹಚ್ಚಿರುವ ನೇಲ್ ಪಾಲಿಸ್ ತೆಗೆಯಲು ಬ್ಲೇಡ್‌ನ್ನು ಬಳಸದೆ ನೇಲ್ ರಿಮೂವರ್ ಬಳಸುವುದು ಸೂಕ್ತ. ಉಗುರಿಗೆ ಬಳಸುವ ಬಣ್ಣ ಕೂಡವೂ ಆಕರ್ಷಕವಾಗಿರುವ ಮತ್ತು ನಮ್ಮ ದೇಹದ ಬಣ್ಣಕ್ಕೆ ಹೊಂದುವ ಬಣ್ಣವನ್ನೇ ಬಳಸಬೇಕು. ಯಾವ್ಯಾವುದೋ ಬಣ್ಣವನ್ನು ಬಳಸಿ ಅವು ಎದ್ದು ಕಾಣುತ್ತಾ ಅಸಹ್ಯ ಎನಿಸಿಬಿಡುತ್ತದೆ. ಆದ್ದರಿಂದ ಉಗುರಿನ ಕಾಳಜಿ ಎಷ್ಟು ಮುಖ್ಯವೋ ಬಳಸುವ ಬಣ್ಣವೂ ಅಷ್ಟೇ ಮುಖ್ಯ ಎಂಬುದನ್ನು ಮರೆಯ ಬಾರದು.

ಕೆಲವರು ಉಗುರು ಬೆಳೆಸುವ ಹವ್ಯಾಸ ಹೊಂದಿರುತ್ತಾರೆ. ಇದು ನಿಜಕ್ಕೂ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದಲ್ಲ.  ಉಗುರನ್ನು ಆಗಾಗ್ಗೆ ಕತ್ತರಿಸುತ್ತಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಕತ್ತರಿಸದೆ ಇದ್ದರೆ ಆರೋಗ್ಯಕ್ಕೆ ದುಷ್ಪರಿಣಾಮ ಬೀರುತ್ತದೆ. ಉಗುರುಗಳಲ್ಲಿ ಕೊಳೆ ತುಂಬಿಕೊಂಡು ಅಸಹ್ಯವಾಗಿ ಕಾಣುತ್ತದೆ.  ಉಗುರಿಗೆ ಸರಿಹೊಂದುವ ಮತ್ತು ಆಕರ್ಷಕವಾಗಿ ಕಾಣುವ ಬಣ್ಣವನ್ನು ಲೇಪಿಸಬೇಕು. ಉಗುರು ಬಣ್ಣ ಹಚ್ಚಿದ ಮೇಲೆ ನೇಲ್ ಪೇಂಟ್ ಹಚ್ಚುವುದು ಸೂಕ್ತ. ನೇಲ್ ಪೇಂಟನ್ನು ಅಲುಗಾಡಿಸಿ ನಂತರ ಹಚ್ಚಿದರೆ ಉಗುರಿಗೆ ಚೆನ್ನಾಗಿ ಹಿಡಿಯುತ್ತದೆ.

Font Awesome Icons

Leave a Reply

Your email address will not be published. Required fields are marked *