ಮೈಸೂರು : ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮುಸ್ಲಿಂ ಸಮುದಾಯದವರು, ಬಿಜೆಪಿ ಪಕ್ಷ ಎಂದರೆ ನೂರಾರು ಪ್ರಶ್ನೆಗಳು.. ಸಾಕಷ್ಟು ಟಿಕೆ ಟಿಪ್ಪಣಿಗಳು ಹುಟ್ಟಿಕೊಳ್ಳುತ್ತವೆ. ಇಂತಹ ಪರಿಸ್ಥಿತಿಯಲ್ಲಿಯೂ ಒಬ್ಬಂಟಿ ಮುಸ್ಲಿಂ ಮಹಿಳೆ ಬಹಿರಂಗ ಪ್ರಚಾರ ಸಭೆಯಲ್ಲಿ ಬಂದು ಕಮಲದ ಬಾವುಟ ಹಿಡಿಯುವುದು ಎಂದರೆ ಸಾಮಾನ್ಯ ವಿಚಾರವೇ ಅಲ್ಲ..!
ಹಾಗಾದ್ರೆ ಆ ಮಹಿಳೆ ಯಾರು ಅಂತೀರಾ..? ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ನಗರ್ಲೆ ಗ್ರಾಮದ ನಾಜಿಯಾ ಬಾನು ಎಂಬುವರು ನಂಜನಗೂಡು ತಾಲ್ಲೂಕಿನ ಸಿಂಧುವಳ್ಳಿ ಗೇಟ್ ಸಮೀಪ ಇರುವ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಎಸ್.ಟಿ ಸಮಾವೇಶದಲ್ಲಿ ಬಿಜೆಪಿ ಮುಖಂಡ ಹಾಗೂ ಮಾಜಿ ಜಿ.ಪಂ ಸದಸ್ಯ ಚಿಕ್ಕರಂಗನಾಯಕ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಕಾರ್ಯಕ್ರಮವು ಮುಗಿಯುವ ಅಂತ ತಲುಪಿದಾಗ ಒಬ್ಬಂಟಿ ಮುಸ್ಲಿಂ ಮಹಿಳೆ ವೇದಿಕೆಯ ಮೇಲೇರಿ ಕಮಲದ ಬಾವುಟ ಹಿಡಿದು ಸೇರ್ಪಡೆಯಾದದ್ದು ಹಿಡಿ ಸಭೆಯನ್ನೇ ಆಶ್ಚರ್ಯ ಗೊಳಿಸುವಂತೆ ಮಾಡಿತು. ಪ್ರಧಾನಿ ನರೇಂದ್ರ ಮೋದಿಯವರ ಉತ್ತಮ ಆಡಳಿತ ನೋಡಿ ಮುಸ್ಲಿಂ ಮಹಿಳೆಯಾಗಿರುವ ನಾನು ಬಿಜೆಪಿ ಪಕ್ಷ ಸೇರಿದ್ದೇನೆ, ತ್ರಿವಳಿ ತಲಾಖ್ ನಿಷೇಧ ಮಾಡಿದ ಹಿನ್ನೆಲೆಯಲ್ಲಿ ನಾನು ಬಿಜೆಪಿ ಸೇರಿಸಿದ್ದೇನೆ. ನಮ್ಮವರನ್ನು ಬಿಜೆಪಿ ಪಕ್ಷಕ್ಕೆ ಮತ ಹಾಕಲು ಜಾಗೃತಿ ಮೂಡಿಸುತ್ತೇನೆ ಎಂದು ಹೇಳಿಕೆಯನ್ನು ಕೂಡ ನೀಡಿದರು.
ನಾಜಿಯಾ ಬಾನು ಕಮಲದ ಬಾವುಟವನ್ನು ಮೂಡಿಗೆರೆಸಿದರೆ ಈಕೆಯ ಪತಿ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ನಗರ್ಲೆ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದಾನೆ. ಗಂಡನ ವಿರುದ್ಧ ಸೆಡ್ಡು ಹೊಡೆದು ಹೆಂಡತಿ ಬಿಜೆಪಿಗೆ ಸೇರ್ಪಡೆಯಾಗಿರುವುದು ಸಭೆಯಲ್ಲಿದ್ದವರನ್ನು ಬೆಚ್ಚಿ ಬೀಳಿಸಿದೆ.