ಅಚ್ಚ ಕನ್ನಡದ ಸ್ವಚ್ಛ ಕಂಠದ ನಿರೂಪಕಿ ಅಪರ್ಣಾ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ನಟಿ ಅಪರ್ಣಾ ಅವರು ಗುರುವಾರ ರಾತ್ರಿ (ಜುಲೈ 11 ) ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಎಲ್ಲ ಕಡೆಗಳಿಂದ ಸಂತಾಪ ವ್ಯಕ್ತವಾಗಿದೆ. ಅಪರ್ಣಾ ಅವರು ಕೆಲ ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಕಿರುತೆರೆ ಹಾಗೂ ಹಿರಿತೆರೆ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಅವರು ಇಹಲೋಕ ತ್ಯಜಿಸಿರುವುದು ಅವರ ಅಭಿಮಾನಿಗಳಿಗೆ ಸಾಕಷ್ಟು ನೋವು ತಂದಿದೆ.
ಅಪರ್ಣಾ ಹುಟ್ಟಿದ್ದು 1966ರಲ್ಲಿ. 1985ರಲ್ಲಿ ರಿಲೀಸ್ ಆದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಮಸಣದ ಹೂವು’ ಚಿತ್ರದ ಮೂಲಕ ಸಿನಿರಂಗಕ್ಕೆ ಅಪರ್ಣಾ ಕಾಲಿಟ್ಟರು. ಈ ಚಿತ್ರದಲ್ಲಿ ಅಂಬರೀಷ್ ಮೊದಲಾದವರು ನಟಿಸಿದ್ದರು. ಮೊದಲ ಸಿನಿಮಾದಲ್ಲೇ ಅಪರ್ಣಾಗೆ ಜನಪ್ರಿಯತೆ ಸಿಕ್ಕಿತು.
ಅನಂತರ ಸಂಗ್ರಾಮ, ನಮ್ಮೂರ ರಾಜ, ಸಾಹಸ ವೀರ, ಇನ್ಸ್ಪೆಕ್ಟರ್ ವಿಕ್ರಂ, ಡಾಕ್ಟರ್ ಕೃಷ್ಣ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ ಸಿನಿಮಾಗಳಿಂದ ಸಂಪೂರ್ಣ ದೂರವೇ ಉಳಿದಿದ್ದ ಅಪರ್ಣಾ, ಇತ್ತೀಚಿಗಷ್ಟೇ ತೆರೆಕಂಡ ‘ಗ್ರೇ ಗೇಮ್ಸ್’ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಅಚ್ಚರಿ ಸಂಗತಿ ಎಂದರೆ ಏಳು ಸಾವಿರಕ್ಕೂ ಅಧಿಕ ವೇದಿಕೆ ಕಾರ್ಯಕ್ರಮಗಳನ್ನು ನಿರೂಪಿಸಿದ ಕೀರ್ತಿ ಅವರಿಗಿದೆ.
ಅಪರ್ಣಾ ತಂದೆ ಹೆಸರು ಕೆ.ಎಸ್ ನಾರಾಯಣಸ್ವಾಮಿ. ಅವರು ಸಿನಿಮಾ ಪತ್ರಕರ್ತರಾಗಿದ್ದರು. ಇಂಥಾ ಅಚ್ಚ ಕನ್ನಡದಲ್ಲಿ ಸ್ಪಷ್ಟವಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಅಪರ್ಣಾಗೆ ಒಂದು ದಿನ ಶಾಕ್ ಎದುರಾಯ್ತು. ಅದು ಬದುಕಿನ ಮಾರ್ಗ ತೋರಿಸಿದ ಅಪ್ಪ ಅಸುನೀಗಿದ್ದರು. ಬಳಿಕ ತಾಯಿ ಜೊತೆ ಅಪರ್ಣಾ ಜೀವನ ಸಾಗಿಸಿದರು.
ಜೀವನದಲ್ಲಿ ಕೊಂಚ ಬದಲಾವಣೆಯಾಗಲು ಬಾಳ ಸಂಗಾತಿಯೂ ಕಾರಣವಾಗುತ್ತಾರೆ. ಅಪರ್ಣಾ ಜೀವನದಲ್ಲಿ ಬಾಳ ಸಂಗಾತಿಯಾಗಿ ಕಾಲಿಟ್ಟ ವಾಸ್ತುಶಿಲ್ಪಿಯಾಗಿರುವ
ನಾಗರಾಜ್ ವಸ್ತಾರೆ. ಅವರ ಜೀವನ ಹೆಜ್ಜೆಗೆ ಸಾತ್ ನೀಡಿದರು.
ಕೇವಲ ಸಿನಿಮಾ ನಿರೂಪಣೆ ಮಾತ್ರವಲ್ಲದೇ ಅಪರ್ಣಾ ಅವರು ಕಿರುತೆರೆಯಲ್ಲೂ ಸಹ ಕಮಾಲ್ ಮಾಡಿದ್ರು. ಕಿರುತೆರೆಯಲ್ಲಿ ಮೂಡಲಮನೆ, ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ಅಪರ್ಣಾ ಅವರು ನಟಿಸಿದ್ದರು. ‘ಪ್ರೀತಿಯಿಲ್ಲದ ಮೇಲೆ’ ಧಾರಾವಾಹಿಯಲ್ಲಿ ಪಲ್ಲವಿಯಾಗಿ ಗುರುತಿಸಿಕೊಂಡಿದ್ದ ಅಪರ್ಣಾ, ಝೀ-ವಾಹಿನಿಯ ‘ಜೋಗುಳ’ ಸರಣಿಯಲ್ಲಿ ಮುಖ್ಯಭೂಮಿಕೆಯಲ್ಲಿ ಪಾತ್ರ ಕಾಣಿಸಿಕೊಂಡು ಕನ್ನಡಿಗರ ಮನೆ ಮಾತಾಗಿದ್ದರು. ಇನ್ನು ‘ಪ್ರೀತಿಯಿಲ್ಲದ ಮೇಲೆ’ ಪಲ್ಲವಿಯ ಪಾತ್ರಕ್ಕೆ ಅಪರ್ಣಾ ಅವರಿಗೆ ಶ್ರೇಷ್ಠನಟಿ ಪ್ರಶಸ್ತಿ ಕೂಡ ಲಭಿಸಿತ್ತು.
2013ರಲ್ಲಿ ಕನ್ನಡದಲ್ಲಿ ಶುರುವಾದ ಬಿಗ್ಬಾಸ್ ಕಾರ್ಯಕ್ರಮದ ಮೊದಲ ಸೀಸನ್ನಲ್ಲಿ ಅಪರ್ಣಾ ಸ್ಪರ್ಧಿಯಾಗಿ ಭಾಗವಹಿಸಿದ್ರು. ಇದಾದ ಬಳಿಕ 2015ರಲ್ಲಿ ಆರಂಭವಾದ ಸೃಜನ್ ಲೋಕೇಶ್ ಅವರ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ಅಪರ್ಣಾ ಅವರು ತಮ್ಮ ವ್ಯಕ್ತಿತ್ವಕ್ಕೆ ತದ್ವಿರುದ್ಧ ಪಾತ್ರ, ಒನ್ ಅಂಡ್ ಓನ್ಲಿ ವರಲಕ್ಷ್ಮೀಯಾಗಿ ಕಾಣಿಸಿಕೊಂಡು ಕನ್ನಡಿಗರ ಮನ ಗೆದ್ದಿದ್ದರು.
ಕಳೆದ 3 ದಶಕಗಳ ವರೆಗೆ ಕನ್ನಡ ಸೇವೆ ಸಲ್ಲಿಸಿದ್ದ ಅಪರ್ಣಾ ಅವರು ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರು ಹತ್ತುವ, ಮತ್ತು ಇಳಿಯುವ ಸೂಚನೆಗೆ ಧ್ವನಿ ಗೂಡಿಸಿದ್ದರು. ಜೊತೆಗೆ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ನಲ್ಲಿ ಘೋಷಣೆ ಸೇರಿ ಅನೇಕ ಪ್ರಕಟಣೆಗಳಿಗೆ ಧ್ವನಿಯಾಗಿದ್ರು.
ಈ ಬಗ್ಗೆ ತಮ್ಮ ಅದ್ಬುತ ಅನುಭವವನ್ನು ಸಂದರ್ಶವೊಂದರಲ್ಲಿ ಹಂಚಿಕೊಂಡಿದ್ದು ಹೀಗೆ. . ಒಂದು ದಿನ ಮೆಟ್ರೋ ಶುರುವಾಗುತ್ತದೆ. ಬಯ್ಯಪ್ಪನಹಳ್ಳಿಯಿಂದ ಎಂಜಿ ರೋಡ್ಗೆ. ಅದೇ ಫಸ್ಟ್. ಖುಷಿ ಏನೆಂದರೆ ನನ್ನ ಧ್ವನಿ ಬರುತ್ತದೆ ಎಂದು. ಅಷ್ಟಾದರೂ ನಾನು ಮೆಟ್ರೋದಲ್ಲಿ ಹೋಗಿರಲಿಲ್ಲ. ನನ್ನ ಧ್ವನಿ ಮೆಟ್ರೋದಲ್ಲಿ ಹೇಗಿರುತ್ತೆ ಅನ್ನೋ ಕುತೂಹಲ ನನಗೆ ಇತ್ತು.
ಅದು ದೀಪಾವಳಿಯ ದಿನ.. ಜಾಸ್ತಿ ಜನ ಇರಲ್ಲ ಎಂದು ನಮ್ಮ ಮನೆಯವರು ಹೇಳಿದರು. ಅಂದೇ ಹೋಗಲು ನಿರ್ಧರಿಸಿದೇವು. ಬನಶಂಕರಿಯಿಂದ ಎಂಜಿ ರೋಡ್ ತನಕ ಹೋಗಿದ್ದೆ. ಎಂಜಿ ರಸ್ತೆಯಿಂದ ಬಯ್ಯಪ್ಪನಹಳ್ಳಿಗೆ ಮೆಟ್ರೋದಲ್ಲಿ ಹೋದೆ. ಮೆಟ್ರೋ ಪ್ರಯಾಣ ಹೇಗಿರುತ್ತೆ ಅಂತಾ ನಾನು ನೋಡಿದೆ. ನನ್ನ ಪ್ರಯಾಣ ಹೇಗಿರುತ್ತೆ? ನನ್ನ ಧ್ವನಿ ಹೇಗಿರುತ್ತೆ ಎಂದು ನೋಡಲು ಹೋಗಿದ್ದೆ. ನನಗೆ ತುಂಬಾ ಖುಷಿ ಆಯಿತು, ತುಂಬಾ ಹೆಮ್ಮೆ ಆಯಿತು. ಇವತ್ತು ಕಾರು ಬೇಕಾ? ಮೆಟ್ರೋದಲ್ಲಿ ಹೊರಟು ಹೋಗೋಣ ಅನ್ನೋ ರೀತಿಯಲ್ಲಿ ಜನ ಮಾತನಾಡುತ್ತಿದ್ದಾರೆ. ನಾನು ಕೂಡ ಅದನ್ನೇ ಸುಮಾರು ಸಲ ಮಾಡಿದ್ದೇನೆ. ಇಂಥ ಮೆಟ್ರೋದ ಜೊತೆ ನಾನು ಧ್ವನಿಯಾಗಿದ್ದೇನೆ ಅನ್ನೋದೇ ನನ್ನ ಹೆಮ್ಮೆ ಎಂದು ಹೇಳಿದ್ದರು.
ಇನ್ನು ಅಪರ್ಣಾ ಬಾರದ ಲೋಕಕ್ಕೆ ತೆರಳಿದ ಅಪರ್ಣಾ ಅವರಿಗೆ ಕವನದ ಮೂಲಕ ಪತಿ ನಾಗರಾಜ್ ವಸ್ತಾರೆ ದುಃಖ ತೋಡಿಕೊಂಡಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನು ಹಂಚಿಕೊಂಡಿರುವ ನಾಗರಾಜ್ ವಸ್ತಾರೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ?
ಬೆಳಗಿಕೊಂಡಿರೆಂದು
ಕಿಡಿ ತಾಕಿಸಿ ಹೊರಟಿತು
ಹೆಣ್ಣು
ಚಿತ್ತು ತೆಗೆದು
ಬತ್ತಿಯ ನೆತ್ತಿ ಚೆನ್ನಾಗಿಸಿ
ತಿರುಪಿ ತಿದ್ದಿ
ಇರು
ತುಸುವಿರೆಂದು ಕರೆದರೂ
ನಿಲ್ಲದೆಯೇ
ಬೇರಾವುದೋ ಕರೆಗೆ
ತಣ್ಣಗೆ ಓಗೊಟ್ಟ ಮೇರೆ
ಯಲ್ಲಿ
ಒಂದೇ ಒಂದು
ನಿಮಿಷ
ಬಂದೇನೆಂದು ಕಡೆಗಳಿಗೆ
ಯ ಸೆರಗಿನ ಬೆನ್ನಿನಲ್ಲಿ
ಅಂದು.
ಕಾದಿದ್ದೇನೆ
ಈಗ ಬಂದಾಳೆಂದು
ಆಗ ಬಂದಾಳೆಂದು
ಮರಳಿ
ಜೀವ ತಂದಾಳೆಂದು
ಇದು
ಮೂರನೇ ದಿವಸ
ಇಷ್ಟಾಗಿ
ಬೆಳಗಲಿಟ್ಟ ಕಿರಿಸೊಡರ
ಬೆಳಕು ನಾನು
ಉರಿವುದಷ್ಟೇ ಕೆಲಸ
ಇರುವ ತನಕ.
ಎರಡು ವರ್ಷ ಹಿಂದೆ ವೈದ್ಯರು ಆಕೆಗೆ ಕ್ಯಾನ್ಸರ್ ದೃಢಪಡಿಸಿದಾಗ, ಇನ್ನು ಆರು ತಿಂಗಳು ಬದುಕಬಹುದು ಎಂದಿದ್ದರು ಎಂದು ಅಪರ್ಣಾ ಅವರ ಪತಿ ನಾಗರಾಜ ವಸ್ತಾರೆ ತಿಳಿಸಿದ್ದಾರೆ.
“ವೈಯಕ್ತಿಕವಾಗಿ ನಾನು ಅಪರ್ಣಾ ತುಂಬಾ ಖಾಸಗಿಯಾಗಿ ಬದುಕಿದವರು. ಅಷ್ಟೇ ಖಾಸಗಿಯಾಗಿ ನಾನು ಅವಳನ್ನು ಬಿಳ್ಕೊಡಲಿಕ್ಕೆ ಇಷ್ಟ ಪಡುತೀನಿ. ಹಾಗಂತ ನನಗೆ ಸೇರುಕ್ಕೆ ಮುಂಚೆನೇ ಹೆಚ್ಚಾಗಿ ಅಪರ್ಣಾ ಕರ್ನಾಟಕಕ್ಕೆ ಸೇರಿದವಳು. ಅಪರ್ಣಾಗೆ ಒಂದು ಆಶಯ ಇತ್ತು. ಸಾವಿನ ಬಳಿಕ ಮಾಧ್ಯಮಗಳ ಮುಂದೆ ಎಲ್ಲವನ್ನು ಹೇಳುವಂತೆ ತಿಳಿಸಿದ್ರು. ಎರಡು ವರ್ಷದ ಹಿಂದೆ ಜುಲೈನಲ್ಲಿ ಶಾಸ್ವಕೋಶ ಕ್ಯಾನ್ಸರ್ ಅಂತಾ ಗೊತ್ತಾಯ್ತು. ಮೊದಲು ನೋಡಿದ ವೈದ್ಯರು ಆರು ತಿಂಗಳು ಬದಕಬಹುದು ಅಂತ ಹೇಳಿದ್ದರು.
ಅವಳು ಛಲಗಾತಿ, ನಾನು ಬದುಕ್ತೀನಿ ಅಂತಾ ಇದ್ಲು. ಅಲ್ಲಿಂದ ಜನವರಿವರೆಗೂ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡಿದ್ಲು. ಫೆಬ್ರವರಿಯಿಂದ ಸೋತಿದ್ಲು. ಒಂದೂವರೆ ವರ್ಷದಿಂದ ಛಲದಿಂದ ಬದುಕಿದ್ಲು. ಅವಳು ಧೀರೆ, ಇಷ್ಟು ದಿನ ಬದುಕಿದ್ದಾಳೆ. ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಇಬ್ಬರು ಜಂಟಿಯಾಗಿ ಸೋತಿದೀವಿ. ಬರುವ ಅಕ್ಟೋಬರ್ಗೆ ಅವಳಿಗೆ 58 ವರ್ಷ ತುಂಬ್ತಿತ್ತು. ಅವಳ ನಿಜವಾದ ವಯಸ್ಸು ಯಾವತ್ತೂ ತೊರಿಸಲಿಲ್ಲ” ಎಂದು ವಸ್ತಾರೆ ವಿವರಿಸಿದ್ದಾರೆ.
ಅಪರ್ಣಾ ಅವರು ಒಂದು ಕನಸು ಕಂಡಿದ್ದರು. ಈ ಕನಸು ಈಡೇರಲಿಲ್ಲ. ಅಪರ್ಣಾಗೆ ನಿರೂಪಣಾ ಶಾಲೆಯೊಂದನ್ನ ತೆರೆಯೋ ಗುರಿಯಿತ್ತು. ತಮ್ಮ ಗೆಳೆಯರ ಬಳಿ ಈ ಆಸೆಯನ್ನು ಅವರು ಹಂಚಿಕೊಂಡಿದ್ದರು. ಆದರೆ, ಈ ಆಸೆ ಈಡೇರಲಿಲ್ಲ ಎಂದು ಮಂಡ್ಯ ರಮೇಶ್ ಅವರು ಹೇಳಿಕೊಂಡಿದ್ದರು.
ಇಂದು ಬನಶಂಕರಿ ಬೆಳಗ್ಗೆ 11:30ರವರೆಗೆ ಬನಶಂಕರಿಯ ಸುಚಿತ್ರಾ ಫಿಲಂ ಸೊಸೈಟಿ ಬಳಿ ಇರುವ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆ ಬಳಿಕ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ವಸ್ತಾರೆ ತಿಳಿಸಿದ್ದಾರೆ. ಅಂತಿಮ ದರ್ಶನಕ್ಕೆ ಬರುವವರು ಖಾಲಿ ಕೈಯಲ್ಲಿ ಬರಬೇಕು. ಪ್ಲಾಸ್ಟಿಕ್ ಹಾಗೂ ಬೊಕೆಗಳನ್ನು ದಯವಿಟ್ಟು ತರಬೇಡಿ. ಅವುಗಳು ಕೆಲವು ಗಂಟೆಗಳ ಬಳಿಕ ಕಸವಾಗುವುದರಿಂದ, ಆ ಮೂಲಕ ಪರಿಸರ ಮಾಲಿನ್ಯ ಮಾಡಲು ನಮಗಿಷ್ಟವಿಲ್ಲ ಎಂದೂ ವಸ್ತಾರೆ ಸೂಚನೆ ನೀಡಿದ್ದಾರೆ.
ಒಟ್ಟಾರೆ, ಭಾಷೆಗೆ ತಕ್ಕ ಭಾವನೆ, ಅಚ್ಚ ಕನ್ನಡವನ್ನು ಸ್ವಚ್ಛವಾಗಿ ಮಾತನಾಡುವ ಶೈಲಿ, ಪದಕ್ಕೆ ಪದ ಸೇರಿಸಿ ಅಕ್ಷರಗಳಿಗೂ ಭಾವ ತುಂಬುತ್ತಿದ್ದ ಸ್ವಚ್ಛ ದನಿ ಚಿರಮೌನಕ್ಕೆ ಜಾರಿದೆ.