ಕನ್ನಡ ಸಾಹಿತ್ಯ ಸಮ್ಮೇಳನ:  ವೇದಿಕೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಚಿವ ಚಲುವರಾಯಸ್ವಾಮಿ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮಂಡ್ಯ,ನವೆಂಬರ್,22,2024 (www.justkannada.in): 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-2024 ರ ಸಂಬಂಧ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಲು ಸಾಂಜೋ ಆಸ್ಪತ್ರೆ ಹಾಗೂ ಅಮರಾವತಿ ಹೋಟೆಲ್ ಹಿಂಭಾಗದಲ್ಲಿ  ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಇಂದು ಭೂಮಿ ಪೂಜೆಯನ್ನು ನೆರವೇರಿಸಿದರು.

ಬಳಿಕ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರ್ 20, 21 ಹಾಗೂ 22 ರಂದು 3 ದಿನಗಳ ಕಾಲ 87ನೇ ಮಂಡ್ಯದಲ್ಲಿ ನಡೆಯಲಿದೆ ಎಂದು ಈಗಾಗಲೇ ತೀರ್ಮಾನವಾಗಿದೆ. ಸಮ್ಮೇಳನಕ್ಕೆ ಕೇವಲ ಒಂದು ತಿಂಗಳು ಬಾಕಿ ಇದೆ. ವೇದಿಕೆ ನಿರ್ಮಾಣಕ್ಕೆ ಇಂದು ಭೂಮಿ ಪೂಜೆಯು ಯಾವುದೇ ವಿಘ್ನಗಳಿಲ್ಲದೆ ನೆರವೇರಿದ್ದು, ಇಂದಿನಿಂದ ವೇದಿಕೆ ನಿರ್ಮಾಣದ ಚಟುವಟಿಕೆಗಳು ಪ್ರಾರಂಭವಾಗಲಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೊ.ರು.ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದ್ದು, ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿರುವ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿರುವುದು ಬಹಳ ಸಂತೋಷದ ವಿಷಯವಾಗಿದೆ. ಅವರಿಗೆ ಕೇಂದ್ರ ಸಾಹಿತ್ಯ ಪರಿಷತ್ತು, ಜಿಲ್ಲಾಡಳಿತ ಹಾಗೂ ಮಂಡ್ಯ ಜಿಲ್ಲೆಯ ಪರವಾಗಿ ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನ ತಿಳಿಸುತ್ತೇನೆ ಎಂದರು.

ರಾಜ್ಯದ ವಿವಿಧ ಭಾಗಗಳಿಂದ ಎಲ್ಲಾ ಸಾಹಿತಿಗಳು, ಕನ್ನಡಾಭಿಮಾನಿಗಳು, ಕನ್ನಡ ಪರ ಹೋರಾಟಗಾರರು, ಕನ್ನಡ ಸಂಘಟನೆಗಳು ಹಾಗೂ ಅನೇಕ ಗಣ್ಯರು ಸಮ್ಮೇಳನಕ್ಕೆ ಆಗಮಿಸಲಿದ್ದಾರೆ. ಸಮ್ಮೇಳನದ ಜವಾಬ್ದಾರಿಯು ಕೇಂದ್ರ ಸಾಹಿತ್ಯ ಪರಿಷತ್ತು, ಜಿಲ್ಲಾ ಸಾಹಿತ್ಯ ಪರಿಷತ್ತು, ಸರ್ಕಾರ, ಜಿಲ್ಲಾಡಳಿತ, ಜಿಲ್ಲೆಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಮೇಲಿದ್ದು, ಕಾರ್ಯಕ್ರಮವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಲು ಸಮ್ಮೇಳನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.

ಸಾಹಿತ್ಯ ಸಮ್ಮೇಳನಕ್ಕೆ ಸುಮಾರು 3 ಲಕ್ಷದಿಂದ 4 ಲಕ್ಷದವರೆಗೆ ಜನರು ಬರುತ್ತಾರೆ ಎಂದು ಅಂದಾಜಿಸಲಾಗಿದ್ದು, ಅವರಿಗೆ   ಬರುವವರಿಗೆ ಊಟ, ಪಾರ್ಕಿಂಗ್ ವ್ಯವಸ್ಥೆ, ಘೋಷ್ಠಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಎಲ್ಲಾ ಸಮಿತಿಗಳೊಂದಿಗೆ ಚರ್ಚಿಸಿ ವೇದಿಕೆ ನಿರ್ಮಾಣದಿಂದ ಹಿಡಿದು ಸಮ್ಮೇಳನಕ್ಕೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯವರೆಗೂ ಕ್ರಿಯಾಯೋಜನೆಯ ಪ್ರಕಾರ ಕೆಲಸಗಳು ಜರುಗುತ್ತಿವೆ. ಸಮ್ಮೇಳನ ಬಹಳ ಅಚ್ಚುಕಟ್ಟಾಗಿ ನಡೆಯಲು ಎಲ್ಲರ ಸಹಕಾರವು ಮುಖ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಮಧು ಜಿ. ಮಾದೇಗೌಡ, ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ ಎಂ ನರೇಂದ್ರಸ್ವಾಮಿ, ಮಂಡ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಪಿ ರವಿಕುಮಾರ್,  ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ಶಾಸಕ ಎಬಿ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವಿರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್ ನಾಗರಾಜು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕಿ ಡಾ ಮೀರಾಶಿವಲಿಂಗಯ್ಯ, ನಗರಸಭೆ ಅಧ್ಯಕ್ಷ ಎಂ ವಿ ಪ್ರಕಾಶ್ (ನಾಗೇಶ್), ಮೈಸೂರು ಸಕ್ಕರೆ ಕಂಪನಿ ನಿಯಮಿತದ ಅಧ್ಯಕ್ಷ ಸಿ.ಡಿ ಗಂಗಾಧರ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯೀಮ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Key words: Kannada Literary Conference, Mandya, Minister, Chaluvarayaswamy

Font Awesome Icons

Leave a Reply

Your email address will not be published. Required fields are marked *