ಬೆಂಗಳೂರು: ಅಯೋಧ್ಯೆಗೆ ಶ್ರೀರಾಮ ಮರಳಿ ಬರುತ್ತಿರುವ ಹಿನ್ನೆಲೆ ದೇಶಾದ್ಯಂತ ದೀಪಾವಳಿ ಆಚರಣೆಗೆ ಕರೆ ನೀಡಲಾಗಿತ್ತು. ರಾಮ ಜ್ಯೋತಿ ಹೆಸರಿನಡಿ ಅಯೋಧ್ಯೆಯಲ್ಲಿ 10 ಲಕ್ಷ ದೀಪಗಳನ್ನು ಬೆಳಗಿಸಲಾಗಿದೆ.
ಬೆಂಗಳೂರು ನಗರದ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ರಾಜ್ಯ ಬಿಜೆಪಿ ಕಚೇರಿ ಮುಂದೆ ಶ್ರೀರಾಮಮಂದಿರದ ಆಕಾರದಲ್ಲಿ ದೀಪ ಬೆಳಗಿಸಲಾಯಿತು.
ಶ್ರೀರಾಮನ ಫೋಟೋ ಮುಂದೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ದೀಪ ಬೆಳಗಿದರು. ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಒಟ್ಟು 1008 ದೀಪಗಳನ್ನು ಬೆಳಗಿದರು.
ಬಳಿಕ ಮಾತನಾಡಿದ ಬಿವೈ ವಿಜಯೇಂದ್ರ, ರಾಮಭಕ್ತರ ಅಪೇಕ್ಷೆಯಂತೆ ಮೋದಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ನೆರವೇರಿದೆ. ಶ್ರೀರಾಮನ ಬಗ್ಗೆ ಭಕ್ತಿ ಪ್ರತಿಯೊಬ್ಬರಲ್ಲೂ ಜಾಗೃತವಾಗಿದೆ. ಪ್ರತಿ ಹಿಂದೂಗಳು ರಾಮಲಲ್ಲಾ ಪ್ರತಿಷ್ಠಾಪನೆ ಆರಾಧಿಸಿದ್ದಾರೆ ಎಂದರು.
ಬೆಂಗಳೂರಿನ ರಸ್ತೆ ಎಲ್ಲಾ ಖಾಲಿ ಖಾಲಿ ಇತ್ತು. ಎಲ್ಲರೂ ಮನೆಯಲ್ಲಿ ಕುಳಿತು ಟಿವಿಯಲ್ಲಿ ಕಾರ್ಯಕ್ರಮ ವೀಕ್ಷಿಸಿದ್ದಾರೆ. ರಾಮ ರಾಜ್ಯದ ಕನಸು ಮೋದಿ ನೇತೃತ್ವದಲ್ಲಿ ನನಸಾಗಲಿದೆ. ಪ್ರತಿ ರಾಜ್ಯ ಅಭಿವೃದ್ಧಿ ಆಗಲಿದೆ. 2047 ಕ್ಕೆ ಭಾರತ ವಿಕಸಿತ ಭಾರತ ಆಗಲಿದೆ. ರಾಮರಾಜ್ಯದ ಕನಸು ಕೂಡ ಮುಂದಿನ ದಿನಗಳಲ್ಲಿ ನನಸಾಗಲಿದೆ. ಪ್ರತಿ ಹಿಂದೂ ಕಾರ್ಯಕರ್ತರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ವೇಳೆ ಪಿ.ರಾಜೀವ್, ನಂದೀಶ್ ರೆಡ್ಡಿ, ಪ್ರೀತಂ ಗೌಡ ಮತ್ತಿತರರು ಉಪಸ್ಥಿತರಿದ್ದರು.