ಪಿರಿಯಾಪಟ್ಟಣ: ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರದ ಹಿಂದೆ ಬಿದ್ದಿದ್ದರೆ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆ ಅಭಿವೃದ್ಧಿ ಹಿಂದೆ ಬಿದ್ದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ತಾಲೂಕಿನ ಮುತ್ತಿನಮುಳುಸೋಗೆ ಗ್ರಾಮದ ಹತ್ತಿರ ಕಾವೇರಿ ನದಿಯಿಂದ ನೀರೆತ್ತಿ 150 ಕೆರೆಗಳು ಹಾಗೂ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿ ಕೊಪ್ಪ ಗ್ರಾಮದ ಬಳಿ ನಡೆದ ಬೃಹತ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,, ಬಿಜೆಪಿಯವರಿಗೆ ಜನಪರ ಕಾಳಜಿ ಇಲ್ಲ. ಮೊದಲ ಬಾರಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಜಾರಿಗೆ ತಂದಿದ್ದ ಎಲ್ಲಾ ಯೋಜನೆಗಳನ್ನು ಅವರು ರದ್ದುಗೊಳಿಸಿದ್ದರು. ಆದರೆ ಮತ್ತೆ ನಾವು ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಗಳನ್ನು ನೀಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಅಭಿವೃದ್ಧಿಗೂ ಶ್ರಮಿಸಿದ್ದೇವೆ. ಜೆಡಿಎಸ್ ಪಕ್ಷದವರು ನಾವು ಜಾತ್ಯತೀತ ಎಂದು ಹೇಳಿಕೊಂಡು ಅಧಿಕಾರದಾಸೆಗಾಗಿ ಕೋಮುವಾದಿಗಳ ಜೊತೆ ಸೇರಿದ್ದಾರೆ ಎಂದು ದೂರಿದರು.
ರೈತರು ಮತ್ತು ಜಾನುವಾರುಗಳ ಉಪಯೋಗ ಹಾಗೂ ಅಂತರ್ಜಲ ಜಾಸ್ತಿಯಾಗಲು ನಾನೇ ಯೋಜನೆ ಶಂಕುಸ್ಥಾಪನೆ ಮಾಡಿದ್ದೇ ಈಗ ನಾನೇ ಉದ್ಘಾಟನೆ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ಈ ಯೋಜನೆ 79 ಹಳ್ಳಿಗಳಿಗೆ ಹಾಗೂ 93 ಸಾವಿರ ಜನರಿಗೆ ಅನುಕೂಲವಾಗಲಿದೆ, ನಾವು ನುಡಿದಂತೆ ನಡೆದು ಕೊಟ್ಟ ಮಾತಿನಂತೆ ನಡೆದಿದ್ದೇವೆ, ರಾಜ್ಯದಲ್ಲಿ ಬರಗಾಲವಿದೆ ನಾವು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದೇವೆ. ಕೇಂದ್ರದಿಂದ ತಂಡ ಬಂದು ತನಿಖೆ ಮಾಡಿ ವರದಿ ತೆಗೆದುಕೊಂಡು ಹೋಯಿತು ಆದರೆ ಕೇಂದ್ರದಿಂದ ಇವತ್ತಿನವರೆಗೆ 1 ರೂ ಕೊಟ್ಟಿಲ್ಲ. ಪ್ರಧಾನಮಂತ್ರಿ ಹಾಗೂ ಅಮಿತ್ ಶಾ ರಲ್ಲಿ ಮನವಿ ಮಾಡಿದರೂ ದುಡ್ಡು ಬಂದಿಲ್ಲ ಕೇಂದ್ರದವರು ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಪ್ರತಾಪ್ ಸಿಂಹ ಅದು ಮಾಡಿದೆ ಇದು ಮಾಡಿದೆ ಎಂದು ಮಾತಾಡಿದ್ದೆ ಮಾತಾಡಿದ್ದು ಆದರೆ ಬರ ಪರಿಹಾರದಲ್ಲಿ ಬಿಜೆಪಿಯ 25 ಸಂಸದರು ಮಾತೇ ಆಡುವುದಿಲ್ಲ, ಬಿಜೆಪಿಯವರು ಮಾತ್ರ ಹಿಂದೂಗಳೇ ಶ್ರೀರಾಮನನ್ನು ದತ್ತು ತೆಗೆದುಕೊಂಡಿದ್ದಾರೆಯೆ ನಾವು ಶ್ರೀರಾಮನ ಭಕ್ತರೇ, ಜೈ ಶ್ರೀರಾಮ್ ವಾಕ್ಯ ಬಿಜೆಪಿ ಅವರ ಆಸ್ತಿಯಲ್ಲ, ಮೊನ್ನೆ ಬೆಂಗಳೂರಿನಲ್ಲಿ ರಾಮಮಂದಿರ ಉದ್ಘಾಟನೆ ಮಾಡಿ ಜೈ ಶ್ರೀರಾಮ್ ಅಂತ ಘೋಷಣೆ ಕೂಗಿಸಿದೆ, ನನ್ನ ಹೆಸರಲ್ಲೇ ರಾಮ ಇದ್ದಾನೆ, ಈ ಡೋಂಗಿಗಳನ್ನು ಮುಂಬರುವ ಚುನಾವಣೆ ಸೋಲಿಸಿ ಕಾಂಗ್ರೆಸ್ ಗೆಲ್ಲಿಸಿ ಎಂದರು.