ದುಬೈ: ಡಿಬಾಸ್ ದರ್ಶನ್ ನಟಿಸಿರುವ ʼಕಾಟೇರಾʼ ಚಿತ್ರ ಕರ್ನಾಟಕದಲ್ಲಷ್ಟೇ ಅಲ್ಲದೆ ಹೊರರಾಜ್ಯಗಳಲ್ಲೂ ಬಿಡುಗಡೆಯಾಗಿ ಸೂಪರ್-ಡೂಪರ್ ಹಿಟ್ ಆಗಿದೆ. ದುಬೈನಲ್ಲಿ ನಡೆದ ಸಿನಿಮಾ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ದರ್ಶನ್ ಅನ್ಯರ ಏಳಿಗೆಯನ್ನು ಸಹಿಸದವರ ಕುರಿತು ಮಾತಾಡಿದ್ದಾರೆ.
ಸಿನಿಮಾದ ಯಶಸ್ಸನ್ನು ಸಂಭ್ರಮಿಸುವ ಭರದಲ್ಲಿ ದರ್ಶನ್ ಸೇರಿ ಕೆಲವರು ಬೆಂಗಳೂರಿನ ಜೆಟ್ಲ್ಯಾಗ್ ಪಬ್ ನಲ್ಲಿ ಸಮಯ ಮೀರಿ ಪಾರ್ಟಿ ಮಾಡಿದ್ದರಿಂದ ನೋಟೀಸ್ ಜಾರಿ ಮಾಡಲಾಗಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ದುಬೈನಿಂದ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅವರು, ಕಾಟೇರಾದ ಯಶಸ್ಸಿಗೆ ಸಹಕರಿಸಿದ ಸಮಸ್ತರಿಗೆ ಧನ್ಯವಾದ ತಿಳಿಸುತ್ತಾ, ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು: ನೀವು ಏನೇ ಮಾಡಿದರೂ ನಾನು ಕೋಪ ಮಾಡಿಕೊಳ್ಳುವುದಿಲ್ಲ, ಬೇಜಾರು ಮಾಡಿಕೊಳ್ಳುವುದಿಲ್ಲ, ನೊಂದುಕೊಳ್ಳುವುದಿಲ್ಲ. ಕಾಲಾಯ ತಸ್ಮಯ್ ನಮಃ ಎಂದು ಬರೆದುಕೊಂಡಿದ್ದಾರೆ.
ಇದರಲ್ಲಿ ಯಾರ ಹೆಸರನ್ನೂ ನೇರವಾಗಿ ಉಲ್ಲೇಖ ಮಾಡದಿದ್ದರೂ, ತಮ್ಮ ಸಾಧನೆಗೆ ಅಡ್ಡಗಾಲು ಹಾಕುವವರಿಗೆ ಈ ಸಂದೇಶವೆಂದಿದ್ದಾರೆ.
ಜೆಟ್ ಲ್ಯಾಗ್ ಪಬ್ ಪ್ರಕರಣದಲ್ಲಿ ದರ್ಶನ್ ಜೊತೆ ಡಾಲಿ ಧನಂಜಯ್, ಚಿಕ್ಕಣ್ಣ, ರಾಕ್ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ನಿನಾಸಂ ಸತೀಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣರಿಗೂ ನೊಟೀಸ್ ಜಾರಿಯಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿಸಲಾಗಿದೆ. ದುಬೈನಿಂದ ಬಂದ ಬಳಿಕ ದರ್ಶನ್ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.