ಕೃಷಿ ವಿವಿ ಸ್ಥಾಪನೆ: ಉನ್ನತ ಶಿಕ್ಷಣ ಸಚಿವರನ್ನು ಭೇಟಿಯಾಗಿ ಚರ್ಚಿಸಿದ ಆಸ್ಟ್ರೇಲಿಯಾ ನಿಯೋಗ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು, ನವೆಂಬರ್,15,2024 (www.justkannada.in): ರಾಜ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸುವ ಸಂಬಂಧಪಟ್ಟಂತೆ ಆಸ್ಟ್ರೇಲಿಯಾದ ವೆಸ್ಟ್ ಸಿಡ್ನಿ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಅಧಿಕಾರಿಗಳು ಆಸ್ಟ್ರೇಲಿಯಾದ ಕಾನ್ಸುಲೇಟ್ ಜನರಲ್ McGeachy ನೇತೃತ್ವದ ನಿಯೋಗದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರನ್ನು ಭೇಟಿಯಾಗಿ ಚರ್ಚಿಸಿದರು.

ಆಸ್ಟ್ರೇಲಿಯಾ ವೆಸ್ಟ್ ಸಿಡ್ನಿ ವಿಶ್ವವಿದ್ಯಾಲಯವು ಭಾರತದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಲು ಉತ್ಸುಕವಾಗಿದ್ದು, ಬೆಂಗಳೂರು ನಗರದಲ್ಲಿ ಆರಂಭಿಸಲು ಉದ್ದೇಶಿಸಿದೆ ಎಂದು ಕುಲಪತಿ ಜಾರ್ಜ್ ವಿಲಿಯಮ್ಸ್ ಅಭಿಪ್ರಾಯಪಟ್ಟರು. ಕೃಷಿಯಲ್ಲಿ ನೀರು ನಿರ್ವಹಣೆ ತಾಂತ್ರಿಕತೆ ಅಳವಡಿಕೆ, ಆಹಾರ ಸಂಸ್ಕರಣೆ ಮುಂತಾದ ಮುಖ್ಯ ವಿಷಯಗಳನ್ನು ಈ ಕೃಷಿ ವಿಶ್ವವಿದ್ಯಾಲಯದಲ್ಲಿ ಆದ್ಯತೆ ನೀಡಲಾಗುತ್ತದೆ ಎಂದು ವಿವರಿಸಿದರು.

ಸ್ವತಂತ್ರವಾಗಿ ವಿಶ್ವವಿದ್ಯಾಲಯ ಸ್ಥಾಪಿಸುವುದು ಅಥವಾ ಕರ್ನಾಟಕದಲ್ಲಿನ ವಿಶ್ವವಿದ್ಯಾಲಯಗಳ ಸಹಯೋಗದಲ್ಲೂ ವೆಸ್ಟ್ ಸಿಡ್ನಿ ವಿಶ್ವವಿದ್ಯಾಲಯವು ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿರುವುದಾಗಿ ಜಾರ್ಜ್ ವಿಲಿಯಮ್ಸ್ ಅಭಿಪ್ರಾಯಪಟ್ಟರು. ವಿದ್ಯಾರ್ಥಿ ವೇತನ ನೀಡುವ ಉದ್ದೇಶವಿರುವುದಾಗಿ ತಿಳಿಸಿದ ಅವರು, ಈಗಾಗಲೇ ವಿಯೆಟ್ನಾಂ, ಇಂಡೋನೇಷಿಯಾದಲ್ಲಿ ಕೃಷಿ ವಿಶ್ವವಿದ್ಯಾಲಯವನ್ನು ವೆಸ್ಟ್ ಸಿಡ್ನಿ ವಿಶ್ವವಿದ್ಯಾಲಯವು ಆರಂಭಿಸಿದೆ. ಯು.ಎ.ಇ. ಯಲ್ಲಿ ಸ್ಥಾಪನೆಗೆ ಮಾತುಕತೆ ನಡೆದಿದೆ ಎಂದರು. ಹಾಗಾಗಿ ಕರ್ನಾಟಕದಲ್ಲೂ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಉತ್ಸುಕವಾಗಿದ್ದು, ನಮಗೆ 30 ಸಾವಿರ ಅಡಿ ಸ್ಥಳಾವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.

ಈ ಸಂಬಂಧ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್,  ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು. ನಮ್ಮ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ಕೃಷಿಗೆ ಸಂಬಂಧಪಟ್ಟಂತಹ ಹೊಸ ಆವಿಷ್ಕಾರದ ವಿಷಯಗಳನ್ನು ಆರಂಭಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಅಲ್ಲದೆ, ವಿದ್ಯಾರ್ಥಿಗಳ ಪರಸ್ಪರ ಕಲಿಕಾ ವಿನಿಮಯ ಕಾರ್ಯಕ್ರಮ ತರಬೇತಿ ಹಾಗೂ ಉಪನ್ಯಾಸಕರ ವಿನಿಮಯದ ಮೂಲಕ ಶೈಕ್ಷಣಿಕವಾಗಿ ಹೆಚ್ಚು ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕೃಷಿಗೆ ಸಂಬಂಧಪಟ್ಟ ಆಹಾರ ಸಂಸ್ಕರಣೆ, ಕೃಷಿಗೆ ಸಂಬಂಧಪಟ್ಟ ಉದ್ಯಮ, ತಾಂತ್ರಿಕರಣ ಬಳಕೆ ಸೇರಿದಂತೆ ಪ್ರಯೋಗಾಲಯಗಳನ್ನು ಸ್ಥಾಪಿಸುವಲ್ಲಿ ಆದ್ಯತೆ ನೀಡಬೇಕೆಂದು ಡಾ. ಶಾಲಿನಿ ರಜನೀಶ್ ಸಲಹೆ ನೀಡಿದರು. ಬೆಂಗಳೂರು ಹೊರತಾಗಿಯೂ ಧಾರವಾಡ ಸೇರಿದಂತೆ ರಾಜ್ಯದ ಇತರೆ ಭಾಗಗಳಲ್ಲೂ ವಿಶ್ವವಿದ್ಯಾಲಯ ಸ್ಥಾಪನೆ ಬಗ್ಗೆ ಚಿಂತಿಸಬೇಕು ಮತ್ತು ನಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಶೇಕಡಾ 50 ರಷ್ಟು ಅವಕಾಶ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಕರ್, ಸೇರಿದಂತೆ, ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ವೆಸ್ಟ್ ಸಿಡ್ನಿ ವಿಶ್ವವಿದ್ಯಾಲಯದ ಅಧಿಕಾರಿಗಳು ಪಾಲ್ಗೊಂಡಿದ್ದರು.

Key words: Bangalore, Agricultural University,  Australian delegation, Minister, MC Sudhakar

Font Awesome Icons

Leave a Reply

Your email address will not be published. Required fields are marked *