ನವದೆಹಲಿ: ಮೂರು ವರ್ಷಗಳ ನಂತರ ದೇಶದಲ್ಲಿ ರೈತರ ಕೂಗು ಕೇಳಿಬರುತ್ತಿದ್ದು, ಭೂಮಿಯ ಪರಿಹಾರ ಹೆಚ್ಚಳಕ್ಕೆ ಬೇಡಿಕೆಯಿಟ್ಟು ಉತ್ತರ ಪ್ರದೇಶದ ನೋಯ್ಡಾದಿಂದ ಸಂಸತ್ ಭವನದ ಕಡೆಗೆ ಮೆರವಣಿಗೆ ಹೊರಟಿದ್ದಾರೆ.ಇದು ಸಂಚಾರ ದಟ್ಟಣೆಗೆ ಕಾರಣವಾಗಿದೆ.
ಪ್ರತಿಭಟನಾಕಾರರನ್ನು ತಡೆಯಲು ಬ್ಯಾರಿಕೇಡ್ ಅಳವಡಿಸಲಾಗಿದ್ದು, ನೋಯ್ಡಾ ಎಕ್ಸ್‌ಪ್ರೆಸ್ ವೇಗೆ ಪ್ರವೇಶಿಸುವ ಎಲ್ಲಾ ಮಾರ್ಗಗಳನ್ನೂ ಸಂಚಾರಿ ಪೊಲೀಸರು ತಡೆದಿದ್ದಾರೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ.
ನೋಯ್ಡಾದಿಂದ ಹೊರಟ ರೈತರು ದೆಹಲಿ ಪ್ರವೇಶಿಸದಂತೆ ದಿಲ್ಲಿ ಪೋಲೀಸರು ಬೃಹತ್ ಸಂಖ್ಯೆಯಲ್ಲಿ ಭದ್ರತಾ ಪಡೆ ಹಾಗು ಜಲ ಫಿರಂಗಿಗಳನ್ನು ನಿಯೋಜಿಸಿದ್ದಾರೆ. ಉತ್ತರ ಪ್ರದೇಶ ಹಾಗು ಹರ್ಯಾಣದ ಮತ್ತಷ್ಟು ರೈತರು ಸೇರ್ಪಡೆಗೊಳ್ಳುವ ಸಾಧ್ಯತೆಯಿರುವುರಿಂದ ಅವರನ್ನು ತಡೆಯಲು ಸೂಕ್ತ ತಯಾರಿ ಮಾಡಲಾಗುತ್ತಿದೆ.
ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ಮೂಲಸೌಕರ್ಯ ಹಾಗೂ ಇತರೆ ಅಭಿವೃದ್ಧಿ ಯೋಜನೆಗಳಿಗಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಹೆಚ್ಚುವರಿ ಪರಿಹಾರ ನೀಡುವಂತೆ ಆಗ್ರಹಿಸಿರುವ ರೈತರು, ಶೇ 10ರಷ್ಟು ಅಬಾದಿ ಜಮೀನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಜಮೀನು ಸ್ವಾಧೀನಪಡಿಸಿಕೊಂಡ ಕಾರಣ ಬಹುತೇಕರು ಭೂರಹಿತರಾಗಿದ್ದಾರೆ. ಅವರಿಗೆ ತಕ್ಕ ಪರಿಹಾರ ಸಿಗಬೇಕು. ಜೊತೆಗೆ, ಸ್ವಾಧೀನಪಡಿಸಿಕೊಂಡಾಗ ಜಮೀನಿಗೆ ಇದ್ದ ದರವನ್ನೇ ಕೊಡಬೇಕು ಎಂದು ಆಗ್ರಹಿಸಿದ್ದಾರೆ.