ಬೆಂಗಳೂರು: ಹಿರಂಡಹಳ್ಳಿ ಗ್ರಾಮದಲ್ಲಿ ರಾಮ ಮಂದಿರ ನಿರ್ಮಾಣವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಇಂದು ಮಂದಿರವನ್ನು ಉದ್ಘಾಟಿಸಿದರು. ಶ್ರೀ ರಾಮ ಟೆಂಪಲ್ ಟ್ರಸ್ಟ್ ನಿರ್ಮಾಣ ಮಾಡಿರುವ ಈ ದೇವಾಲಯದಲ್ಲಿ ಸೀತಾ-ರಾಮ, ಲಕ್ಷ್ಮಣ ಹಾಗೂ 33 ಅಡಿ ಆಂಜನೇಯ ದೇವರ ಪ್ರತಿಷ್ಠಾಪನೆ ಮಾಡಲಾಗಿದೆ.
ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಯೋಧ್ಯೆಯಲ್ಲಿ ಶತಮಾನಗಳ ಬಳಿಕ ಶ್ರೀರಾಮನ ಪ್ರತಿಷ್ಠಾಪನೆ ಆಗುತ್ತಿರುವಾಗ ಕರ್ನಾಟಕದಲ್ಲಿ ತಾವು ಸರ್ಕಾರಿ ರಜೆ ನೀಡದಿರುವುದನ್ನ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
ಇದು ರಾಜಕೀಯ ಕಾರ್ಯಕ್ರಮ ಅಲ್ಲ. ಇಲ್ಲಿರುವ ರಾಮನಲ್ಲಿಯೇ ನಮ್ಮೂರಿನ ರಾಮ, ಅಯೋಧ್ಯೆಯ ರಾಮನನ್ನು ಕಾಣಬಹುದು. ಎಲ್ಲರೂ ಒಂದೇ ಅಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ನಾನು ಅಯೋಧ್ಯೆಗೆ ಹೋಗುತ್ತೇನೆ ಎಂದು ಪುನರುಚ್ಚರಿಸಿದ ಸಿದ್ದರಾಮಯ್ಯ ಅವರು ಗಾಂಧೀಜಿ ಕೂಡ ರಾಮನ ಭಕ್ತ ಎಂದರು.
ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ರಜೆ ನೀಡಿದ್ಯಾ? ಕಾರ್ಯಕ್ರಮ ನಡೆಯುತ್ತಿರುವುದು ಅಯೋಧ್ಯೆಯಲ್ಲಿ. ಆದರೆ ಕೇರಳ, ದೆಹಲಿ (ಜನವರಿ 22 ರಂದು ದೆಹಲಿ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ), ಪಶ್ಚಿಮ ಬಂಗಾಳದಲ್ಲಿ ರಜೆ ಇದ್ಯಾ? ಎಂದು ರಜೆ ನೀಡದ ವಿಚಾರಕ್ಕೆ ಬಿಜೆಪಿ ಆಕ್ಷೇಪ ವಿಚಾರಕ್ಕೆ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಖಾರವಾಗಿ ಪ್ರಶ್ನಿಸಿದರು.
ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಉಪಸ್ಥಿತಿಯಲ್ಲಿ ಕಳೆದ 3 ದಿನಗಳಿಂದ ಪೂಜೆ ಪುನಸ್ಕಾರಗಳನ್ನ ನಡೆಸಲಾಗಿದೆ.