ವಿಜಯಪುರ: ವಿಜಯಪುರದಲ್ಲಿ ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಮಗು ಸಾತ್ವಿಕ್ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ. ಘಟನಾ ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.
ಎರಡು ಜೆಸಿಬಿ ಹಾಗೂ 1 ಹಿಟಾಚಿ ಬಳಸಿ ಸಾತ್ವಿಕ್ ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದ ಎಸ್ಡಿಆರ್ಎಫ್ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ಆರಂಭಿಸಿದೆ. ಬಾಲಕನ ಉಸಿರಾಟಕ್ಕೆ ತೊಂದರೆಯಾಗದಂತೆ ಆರೋಗ್ಯ ಸಿಬ್ಬಂದಿ ಕೊಳವೆ ಬಾಯಿಯೊಳಗೆ ಆಕ್ಸಿಜನ್ ಪೂರೈಕೆ ಮಾಡಿದ್ದಾರೆ. ಅಲ್ಲದೇ ಕ್ಯಾಮೆರಾ ಮೂಲಕ ಬಾಲಕನ ಚಲನವಲನಗಳನ್ನ ಗಮನಿಸಲಾಗುತ್ತಿದೆ.
ಇನ್ನು ಮಗುವಿನ ಎರಡು ಕಾಲುಗಳು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು ಕಾಲುಗಳು ಅಲ್ಲಾಡುತ್ತಿವೆ. ಆದಷ್ಟು ಬೇಗ ಮಗು ಹೊರಗೆ ಬರಲೆಂದು ಕುಟುಂಬಸ್ಥರು ಸೇರಿ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
ಬದುಕು ಸಾವಿನ ಮಧ್ಯೆ ಹೋರಾಡುತ್ತಿರುವು ಮಗುವಿನ ರಕ್ಷಣೆಗಾಗಿ ಕಾರ್ಯಚರಣೆ ಮುಂದುವರೆದಿದ್ದು, ರಕ್ಷಣಾ ಕಾರ್ಯದ ವೇಳೆ ಮಗುವಿನ ಮೇಲೆ ಮಣ್ಣು ಬಿದ್ದಿದೆ. ಕೊಳವೆ ಬಾವಿಯ 16 ಅಡಿಯಲ್ಲಿ ಮಗು ಸಿಲುಕಿದ್ದು, ಅಕ್ಕಪಕ್ಕದಲ್ಲಿ ಮಣ್ಣು ತೆರೆವುಗೊಳಿಸಿ ಮಗುವನ್ನ ಹೊರ ತರಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.