ಗೋಪಾಲಸ್ವಾಮಿ ಬೆಟ್ಟದಲ್ಲಿ ಡ್ರೋನ್ ಬಳಕೆ: ವಿಶ್ವೇಶ್ವರ ಭಟ್‍ಗೆ ನೋಟಿಸ್

ಚಾಮರಾಜನಗರ: ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಹೊಂಡಕೊಂಡಿರುವ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಪತ್ರಿಕಾ ಸಂಪಾದಕ ವಿಶ್ವೇಶ್ವರ ಭಟ್  ಅವರು ಡ್ರೋನ್ ಕ್ಯಾಮರಾದಲ್ಲಿ ವಿಡಿಯೋ ಚಿತ್ರೀಕರಣ ಮಾಡಿರುವ ಪ್ರಕರಣ ಸಂಬಂಧ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಾಧಿಕಾರಿಗಳು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ನೋಟಿಸ್ ನೀಡಿ ತನಿಖೆ ನಡೆಸುವಂತೆ ಸೂಚಿಸಲಾಗಿದೆ.

ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್ ಕುಮಾರ್ ಮಾಹಿತಿ ನೀಡಿದ್ದು, ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಡ್ರೋನ್ ಬಳಕೆ ಮಾಡಲು ಅನುಮತಿ ಪಡೆದಿಲ್ಲ. ಹೀಗಾಗಿ  ಡ್ರೋನ್ ಬಳಕೆ ಅನುಮತಿ ನೀಡಿದ್ದು ಯಾರು  ಎಂದು ಪ್ರಶ್ನಿಸಲಾಗಿದೆ. ಈಗಾಗಲೇ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ದ್ರೋಣ್ ಹಾರಾಟ ಚಿತ್ರೀಕರಣ ಘಟನೆಗೆ ಸಂಬಂಧಿಸಿದಂತೆ, ಅರಣ್ಯ ಇಲಾಖೆಯ ಹುಲಿ ಯೋಜನೆ ವಿಭಾಗದ ಎಪಿಸಿಸಿಎಫ್ ಅವರ ಕಚೇರಿಗೆ ದೂರು ಕೂಡ ಸಲ್ಲಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಬೆಟ್ಟಕ್ಕೆ ಸಂಜೆ 4.40ರ ಬಳಿಕ ಭೇಟಿ ನೀಡಿದ್ದ ವಿಶ್ವೇಶ್ವರಭಟ್ ಡ್ರೋನ್ ಕ್ಯಾಮೆರಾದ ಮೂಲಕ ದೇವಾಲಯದ ಆವರಣದಲ್ಲಿ ಚಿತ್ರೀಕರಣ ನಡೆಸಿದ್ದರು. ಅದನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ  ಹಾಗೂ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ವಿಡಿಯೊ ಚಿತ್ರೀಕರಣ ಮಾಡುವಂತಿಲ್ಲ. ಜೊತೆಗೆ ಸಂಜೆ 4.30ರ ನಂತರ ಸಾರ್ವಜನಿಕರು ಅಲ್ಲಿಗೆ ಭೇಟಿ ನೀಡುವಂತಿಲ್ಲ. ಈ ಬಗ್ಗೆ ವಾಟ್ಸ್ಆ್ಯಪ್ ಗ್ರೂಪ್  ಗಳಲ್ಲಿ ಹಾಗೂ ಪರಿಸರವಾದಿಗಳಲ್ಲಿ ತೀವ್ರ ಚರ್ಚೆ ನಡೆದಿತ್ತು.

ಇದೆಲ್ಲದರ ನಡುವೆ ವಿಶ್ವೇಶ್ವರ ಭಟ್ ರವರಿಗೆ ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯ ಅಧಿಕಾರಿ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಅನುಮತಿ ಇಲ್ಲದೆ ಡ್ರೋನ್ ಮೂಲಕ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದೀರಿ. ಇದು ವನ್ಯಜೀವಿ ಸಂರಕ್ಷಣೆ ಕಾಯ್ದೆ 1972ರ ಸೆಕ್ಷನ್ 28,  1(ಬಿ) ಉಲ್ಲಂಘನೆ. ಬೆಟ್ಟದ ತಪ್ಪಲಿನಿಂದ ಬೆಟ್ಟಕ್ಕೆ ತೆರಳಲು ಸಂಜೆ 4 ಗಂಟೆಯವರೆಗೆ ಮಾತ್ರ ಅವಕಾಶ ಇರುತ್ತದೆ.

ನೀವು ಚಿತ್ರಗಳನ್ನು ಪೋಸ್ಟ್ ಮಾಡಿ ಸಂಜೆ 6 ಗಂಟೆಗೆ ಎಂದು ನಮೂದಿಸಿದ್ದೀರಿ. ಈ ಪತ್ರ ತಲುಪಿದ ಕೂಡಲೇ ಕಚೇರಿಗೆ ಹಾಜರಾಗಿ ಈ ಎರಡು ವಿಷಯಗಳ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ನೋಟಿಸ್‍  ನಲ್ಲಿ  ವಲಯ ಅರಣ್ಯಾಧಿಕಾರಿ ಮಂಜುನಾಥ್ ಹೇಳಿದ್ದಾರೆ.

Font Awesome Icons

Leave a Reply

Your email address will not be published. Required fields are marked *