ಚುನಾವಣಾಧಿಕಾರಿ ದಿವ್ಯ ಪ್ರಭು – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಧಾರವಾಡ : ಧಾರವಾಡ ಲೋಕಸಭೆ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸ್ವೀಕೃತವಾದ ಎಲ್ಲ ನಾಮಪತ್ರಗಳ ಪರಿಶೀಲನೆ ಕಾರ್ಯ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ, ಅಭ್ಯರ್ಥಿಗಳ ಮತ್ತು ಸೂಚಕರ ಸಮ್ಮುಖದಲ್ಲಿ ಜರುಗಿತು.

ನಾಮಪತ್ರ ಸಲ್ಲಿಸಿದ್ದ 29 ಅಭ್ಯರ್ಥಿಗಳ ಎಲ್ಲ ನಾಮತ್ರಗಳನ್ನು ಪರಿಶೀಲಿಸಿ, ಸರಿಯಾದ ದಾಖಲೆ ಸಲ್ಲಿಸದ ನಾಲ್ಕು ಅಭ್ಯರ್ಥಿಗಳ 7 ನಾಮಪತ್ರಗಳು ಹಾಗೂ ಇಬ್ಬರು ಅಭ್ಯರ್ಥಿಗಳ ತಲಾ ಒಂದು ನಾಮಪತ್ರಗಳು ತಿರಸ್ಕೃತವಾಗಿದ್ದು, 25 ಅಭ್ಯರ್ಥಿಗಳ 35 ನಾಮಪತ್ರಗಳು ಸ್ವೀಕೃತವಾಗಿವೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ನಾಮಪತ್ರದೊಂದಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸದ ಹಿನ್ನಲೆಯಲ್ಲಿ, ರಾಷ್ಟ್ರೀಯ ಜನ ಸಂಭಾವನಾ ಪಾರ್ಟಿಯ ನಾಗರಾಜ ಶ್ರೀಧರ ಶೇಟ್, ಬಹುಜನ ಸಮಾಜ ಪಕ್ಷದ ಶೋಭಾ ಬಳ್ಳಾರಿ, ರೈತ ಭಾರತ ಪಾರ್ಟಿಯ ಹೇಮರಾಜ ಬಡ್ನಿ ಹಾಗೂ ಪಕ್ಷೇತರ ಅಭ್ಯರ್ಥಿ ರಾಹುಲ್ ಗಾಂಧಿ ಎನ್ ಅವರ ನಾಮಪತ್ರಗಳು ತಿರಸ್ಕೃತವಾಗಿವೆ.

ಶಿವಾನಂದ ಮುತ್ತಣ್ಣವರ ಅವರು ಭಾರತೀಯ ಜನತಾ ಪಕ್ಷದ ಹೆಸರಿನಲ್ಲಿ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತವಾಗಿದ್ದು, ಅವರು ಪಕ್ಷೇತರರಾಗಿ ಸಲ್ಲಿಸಿದ್ದ ನಾಮಪತ್ರ ಸ್ವೀಕೃತವಾಗಿದೆ. ಮತ್ತು ವೀಣಾ ಜನಗಿ ಅವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಹೆಸರಿನಲ್ಲಿ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತವಾಗಿದ್ದು, ಅವರು ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರ ಸ್ವೀಕೃತವಾಗಿದೆ.

Vote 1

ಒಟ್ಟಾರೆಯಾಗಿ ಧಾರವಾಡ ಲೋಕಸಭಾ ಮತಕ್ಷೇತ್ರಕ್ಕೆ ಸಲ್ಲಿಕೆ ಅಗಿದ್ದ 29 ಅಭ್ಯರ್ಥಿಗಳ 44 ನಾಮಪತ್ರಗಳಲ್ಲಿ ನಾಲ್ಕು ಅಭ್ಯರ್ಥಿಗಳ 7 ನಾಮಪತ್ರಗಳು ಮತ್ತು ಇಬ್ಬರು ಅಭ್ಯರ್ಥಿಗಳ ತಲಾ ಒಂದು ನಾಮಪತ್ರಗಳು ಸೇರಿ 9 ನಾಮಪತ್ರಗಳು ತಿರಸ್ಕೃತವಾಗಿವೆ. ಮತ್ತು 25 ಅಭ್ಯರ್ಥಿಗಳ 35 ನಾಮಪತ್ರಗಳು ಕ್ರಮಬದ್ದವಾಗಿದ್ದು, ಸ್ವೀಕೃತವಾಗಿವೆ ಎಂದು ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ನಾಮಪತ್ರಗಳ ಪರಿಶೀಲನೆ ಸಂದರ್ಭದಲ್ಲಿ ಧಾರವಾಡ ಲೋಕಸಭಾ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾದ, ಹಿರಿಯ ಐಎಎಸ್ ಅಧಿಕಾರಿ ಅಜಯ ಗುಪ್ತಾ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮತ್ತು ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳು, ಅಭ್ಯರ್ಥಿಗಳ ಸೂಚಕರು ಉಪಸ್ಥಿತರಿದ್ದರು.

ನಾಮಪತ್ರ ಹಿಂಡೆಯಲು ಅವಕಾಶ: ಧಾರವಾಡ ಲೋಕಸಭೆ ಚುನಾವಣೆಗೆ ಸಲ್ಲಿಸಿರುವ ನಾಮಪತ್ರಗಳು ಕ್ರಮಬದ್ದವಾಗಿರುವ ಅಭ್ಯರ್ಥಿಗಳು ಇಚ್ಚಿಸಿದಲ್ಲಿ ತಮ್ಮ ನಾಮಪತ್ರಗಳನ್ನು ಹಿಂಪಡೆಯಲು ಏ.22 ರ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶವಿದೆ. ನಾಮಪತ್ರ ಹಿಂಪಡೆಯಲು ಅಗತ್ಯವಿರುವ ನಮೂನೆ 5 ರ ಅರ್ಜಿಯು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿದ್ದು, ಅದನ್ನು ಪಡೆದು ನಿಗಧಿತ ಸಮಯದೊಳಗೆ ಸಲ್ಲಿಸಬಹುದು.

ನಾಮಪತ್ರ ಹಿಂಪಡೆಯುವ ಅವಧಿ ಮುಗಿದ ಮೇಲೆ ಅಂತಿಮವಾಗಿ ಚುನಾವಣಾ (ಕಣದಲ್ಲಿ) ಸ್ಪರ್ಧೆಯಲ್ಲಿ ಉಳಿಯುವ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *