ಬೆಂಗಳೂರು: ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿರುವ ಸಾಮಾಜಿಕ- ಶೈಕ್ಷಣಿಕ ವರದಿಯ ಬಗ್ಗೆ ಸಾರ್ವಜನಿಕ ಸಂದೇಹಗಳಿಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿ ಬೆಂಗಳೂರು ಪೂರ್ವ ತಾಲ್ಲೂಕು ಘಟಕದ ಶ್ರೀ ಭುವನೇಶ್ವರಿ ಒಕ್ಕಲಿಗರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಚಳವಳಿ ಆರಂಭಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭುವನೇಶ್ವರಿ ಒಕ್ಕಲಿಗ ಸಂಘದ ಬೆಂಗಳೂರು ಪೂರ್ವ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎಂ. ಮಂಜುರಾಜು, ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ವರದಿ ಅಂಗೀಕರಿಸುವ ಮುನ್ನ ರಾಜ್ಯದ ಜನರಿಗೆ ಸ್ಪಷ್ಟನೆ ನೀಡಬೇಕು. ವರದಿ ಸಿದ್ಧಪಡಿಸಿ 9 ವರ್ಷಗಳು ಕಳೆದಿದ್ದು, ಈ ಅವಧಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ವಲಯದಲ್ಲಿ ಬದಲಾವಣೆಗಳಾಗಿವೆ.
ಜನ ಸಂಖ್ಯೆಯೂ ಸಹ ಹೆಚ್ಚಳವಾಗಿದೆ. ಇದು ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವರದಿಯೋ ಅಥವಾ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆಯೋ? ಎಂಬ ಸಂದೇಹವಿದ್ದು, ಇದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ವರದಿಯಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಈ ಅಂಕಿ ಸಂಶಗಳು ನಿಜವೇ?. ವರದಿ ಕಳುವಾಗಿವೆ ಎಂದು ವರದಿಯಾಗಿತ್ತು. ಹಾಗಾದರೇ ವರದಿ ನೈಜನತೆ ಬಗ್ಗೆ ಮಾಹಿತಿ ನೀಡಬೇಕು. ವಕ್ಕಲಿಗ ಸಮುದಾಯಕ್ಕೆ ವರದಿ ಬಗ್ಗೆ ವಿಶ್ವಾಸಾರ್ಹತೆ ಮೂಡುತ್ತಿಲ್ಲ. ಹಿಂದುಳಿದ ವರ್ಗಗಳ ಹಲವಾರು ಮಠಾಧೀಶರು, ಸಮುದಾಯದ ಮುಖಂಡರು ಈ ವರದಿಯನ್ನು ನಂಬುತ್ತಿಲ್ಲ. ವೀರಶೈವ ಸಮುದಾಯದವರು ಪ್ರತ್ಯೇಕ ಸಮೀಕ್ಷೆ ನಡೆಸುವುದಾಗಿ ಹೇಳಿದ್ದು, ವರದಿ ಬಗ್ಗೆ ವಿಶ್ವಾಸ ಮೂಡುತ್ತಿಲ್ಲ. ಹೀಗಾಗಿ ಪತ್ರ ಚಳವಳಿ ಆರಂಭಿಸಿರುವುದಾಗಿ ಹೇಳಿದರು.