ಜಾರ್ಖಂಡ್ ವ್ಯಕ್ತಿಗೆ ಪುನರ್ಜನ್ಮ ನೀಡಿದ ಹೊಸಬೆಳಕು ಆಶ್ರಮ

ಉಡುಪಿ : ಕಳೆದ ಎರಡುವರೆ ತಿಂಗಳಿನಿಂದ ತೀರಾ ಅನಾರೋಗ್ಯಕ್ಕೀಡಾಗಿ ನಡೆದಾಡಲಾಗದೆ ಸಂಕಟ ಪಡುತ್ತಿದ್ದ ವ್ಯಕ್ತಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದು, ಆಶ್ರಮದ ಉಪಚಾರಕ್ಕೆ ಇದೀಗ ವ್ಯಕ್ತಿ ಗುಣಮುಖರಾಗಿ ತನ್ನ ಕುಟುಂಬವನ್ನು ಸೇರುವಲ್ಲಿ ಯಶಸ್ವಿಯಾಗಿದ್ದಾರೆ.

ಜಾರ್ಖಂಡ್ ಮೂಲದ ರಾಜೇಶ್ (30) ಎಂಬವರೇ ಈ ಅದೃಷ್ಟಶಾಲಿ ವ್ಯಕ್ತಿಯಾಗಿದ್ದು, ಎರಡುವರೆ ತಿಂಗಳಿನಿಂದ ಆಹಾರವನ್ನು ಸೇವಿಸದೆ, ಮಲಗಿದ್ದಲ್ಲಿಯೇ ಮಲ,ಮೂತ್ರಾದಿಗಳನ್ನು ಮಾಡುತ್ತಾ ಶವದಂತೆ ಮಲಗಿದ್ದರು. ಅವರು ಬದುಕುಳಿಯುತ್ತಾರೆ ಎಂಬ ನಿರೀಕ್ಷೆಯೇ ಇರಲಿಲ್ಲ.

ವಿಶು ಶೆಟ್ಟಿ ಅವರು ವ್ಯಕ್ತಿಯನ್ನು ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದರು. ಅಲ್ಲಿ ಆಶ್ರಮದ ಮಂದಿ ರಾಜೇಶ್ ಅವರಿಗೆ ಚಮಚದ ಮೂಲಕ ಆಹಾರವನ್ನು ನೀಡಿ ಉಪಚರಿಸಿದ್ದಾರೆ. ಕೋಮ ಸ್ಥಿತಿಯಲ್ಲಿಯೇ ಇದ್ದ ರಾಜೇಶ್ ಒಂದು ದಿನ ಇದಕ್ಕಿದ್ದಂತೆ ಎದ್ದು ಕುಳಿತು ನಡೆಯಲಾರಂಭಿಸಿದ್ದಾರೆ. 2-3 ದಿನಗಳಲ್ಲಿ ತಾನೇ ಆಹಾರ ಸೇವಿಸಲಾರಂಭಿಸಿದ್ದಾರೆ. ಕೊನೆಗೆ ತನ್ನ ಮನೆಯ ದೂರವಾಣಿ ಸಂಖ್ಯೆಯನ್ನು ನೆನಪು ಮಾಡಿಕೊಳ್ಳುವಲ್ಲಿ ಸಶಕ್ತರಾಗಿದ್ದಾರೆ.

ಎರಡು ಮಕ್ಕಳ ತಂದೆಯಾಗಿದ್ದ ರಾಜೇಶ್ : ರಾಜೇಶ್ ನೀಡಿದ ದೂರವಾಣಿ ಸಂಖ್ಯೆಗೆ ಪೋನಾಯಿಸಿದಾಗ ಅದು ಜಾರ್ಖಂಡಿನಲ್ಲಿರುವ ರಾಜೇಶ್ ಕುಟುಂಬ ಎಂದು ಗೊತ್ತಾಗಿದೆ. ಈ ಸಂದರ್ಭದಲ್ಲಿ ಅವರ ಕರುಣಾಜನಕ ಕಥೆ ಕೂಡಾ ಬಯಲಾಗಿದೆ. ರಾಜೇಶ್‌ಗೆ ಮದುವೆಯಾಗಿ 2 ಪುಟ್ಟ ಮಕ್ಕಳಿದ್ದು, ಊರು ಬಿಟ್ಟು ಉಡುಪಿಗೆ ಬಂದಿದ್ದರು.

ಅನಾರೋಗ್ಯಕ್ಕೆ ತುತ್ತಾಗಿ ನಡೆಯಲಾಗದ ಸ್ಥಿತಿಗೆ ತಲುಪಿದ್ದರು. ಇಹಪರದ ಅರಿವೇ ಇಲ್ಲದಂತಾಗಿ ತನ್ನ ಮನೆಯವರ ವಿಳಾಸ, ಪರಿಚಯ ಎಲ್ಲಾ ಮರೆತಿದ್ದರು. ಆಶ್ರಮದ ಕರೆಗೆ ರಾಜೇಶ್‌ನ ಸಂಬಂಧಿಕರು ಉಡುಪಿಗೆ ಆಗಮಿಸಿ, ಶನಿವಾರ ಹೊಸಬೆಳಕು ಆಶ್ರಮದಲ್ಲಿದ್ದ ರಾಜೇಶ್‌ನನ್ನು ತಮ್ಮ ಜೊತೆಗೆ ಜಾರ್ಖಂಡಿಗೆ ಕರೆದುಕೊಂಡು ಹೋಗಿದ್ದಾರೆ.

ಖರ್ಚುವೆಚ್ಚ ಭರಿಸಿ ಕಳುಹಿಸಿದರು : ರಾಜೇಶ್ ತೀರಾ ಅನಾರೋಗ್ಯಕ್ಕೆ ತುತ್ತಾಗಿದ್ದ ಸಂದರ್ಭದಲ್ಲಿ ತನ್ನ ಮನೆಯ ಸದಸ್ಯನಂತೆಯೇ ಚಿಕಿತ್ಸೆ, ಉಪಚಾರ ಮಾಡಿದ ಆಶ್ರಮದ ಮುಖ್ಯಸ್ಥೆ ತನುಲಾ ಅವರ ಸೇವೆ ಅಭಿನಂದನೀಯ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ. ಕಡು ಬಡತನದಲ್ಲಿರುವ ರಾಜೇಶ್‌ನ ಕುಟುಂಬ ಸಾಲ ಮಾಡಿ ಉಡುಪಿಗೆ ಬಂದಿದ್ದು, ಅವರು ಮರಳಿ ಊರಿಗೆ ಹೋಗುವ ಖರ್ಚನ್ನು ವಿಶು ಶೆಟ್ಟಿ ಹಾಗೂ ಆಶ್ರಮದ ಮುಖ್ಯಸ್ಥರು ಭರಿಸಿದ್ದಾರೆ.

ರಾಜೇಶ್ ಕಾಣೆಯಾದ ಬಗ್ಗೆ ಮನೆಯವರು ಜಾರ್ಖಂಡಿನಲ್ಲಿ ಪೊಲೀಸರಿಗೆ ದೂರು ಕೂಡಾ ನೀಡಿದ್ದರು. ರಾಜೇಶ್ ಅವರಿಗೆ ಸೂಕ್ತ ಚಿಕಿತ್ಸೆ ಹಾಗೂ ಆಶ್ರಯ ನೀಡಿ ಉಪಚರಿಸಿದ ಆಶ್ರಮದ ಮುಖ್ಯಸ್ಥೆ ತನುಲಾ ಹಾಗೂ ಸಮಾಜ ಸೇವಕ ವಿಶು ಶೆಟ್ಟಿ ಅವರಿಗೆ ರಾಜೇಶ್ ಅವರ ಸಂಬಂಧಿಕರು ತುಂಬು ಹೃದಯದಿಂದ ಕೃತಜ್ಞತೆ ಸಲ್ಲಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ರಾಮದಾಸ್ ಪಾಲನ್ ಉದ್ಯಾವರ ಸಹಕರಿಸಿದ್ದರು.

Font Awesome Icons

Leave a Reply

Your email address will not be published. Required fields are marked *