ಜುಟು ಜುಟು ತುಂತುರು ಮಳೆಯಲ್ಲೂ ಪಾರಂಪರಿಕ ಟಾಂಗಾ ಸವಾರಿ: 40ಕ್ಕೂ ಹೆಚ್ಚು ಜೋಡಿಗಳು ಭಾಗಿ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು.ಅಕ್ಟೋಬರ್, 5,2024 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, ನಾನಾ ಜಿಲ್ಲೆಗಳಿಂದ ಆಗಮಿಸಿದಂತಹ  ದಂಪತಿಗಳು  ಮುಂಜಾನೆಯ ತುಂತುರು ಮಳೆಯಲ್ಲೂ ತಮ್ಮ ವಿವಿಧ ಪ್ರಕಾರದ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ನೆರೆದಿದ್ದಂತಹ ಜನರ ಕಣ್ಮನ ಸೆಳೆದರು.

ಇಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ರಂಗಚಾರ್ಲು ಪುರಭವನದ ಆವರಣದಲ್ಲಿ (ಟೌನ್ ಹಾಲ್ ) ನಡೆದ ಪಾರಂಪರಿಕ ಉಡುಗೆಯಲ್ಲಿ ದಂಪತಿಗಳಿಗೆ ಟಾಂಗಾ ಸವಾರಿಯನ್ನು ಜೋಡಿಗಳಿಗೆ ಭಾಗಿನ ಕೊಡುವ ಮೂಲಕ  ಪ್ರಾರಂಭಿಸಲಾಯಿತು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ದೇವರಾಜು ಎ ಅವರು ಮಾತನಾಡಿ, ಸಾಮೂಹಿಕ ವಿವಾಹವನ್ನು ಏರ್ಪಾಡು ಮಾಡಿರುವ ರೀತಿಯಲ್ಲಿ ವೇದಿಕೆಯು ಕಂಗೊಳಿಸುತ್ತಿದೆ. ನೂತನ ದಂಪತಿಗಳಂತೆ ಎಲ್ಲಾ ಜೋಡಿಗಳು ಜನರನ್ನು ಆಕರ್ಷಿಸುತ್ತಿದ್ದು, ತುಂತುರು ಹನಿಯ ನಡುವೆಯೂ ಸುಂದರವಾದ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ ಎಂದರು.

ನಮ್ಮ ಇಲಾಖೆಯು ಪರಂಪರೆಯನ್ನು ಸಂರಕ್ಷಿಸಿ, ರಕ್ಷಿಸಿ  ಅದನ್ನು ಮುಂದಿನ ಪೀಳಿಗೆಗೆ  ರವಾನಿಸುವಂತಹ ಕೆಲಸವನ್ನು ಮಾಡುತ್ತಿದೆ. ಸಂಸ್ಕೃತಿಯನ್ನು ಪ್ರಚಲಿತಗೊಳಿಸಿ , ಹೆಚ್ಚು ಜನರಿಗೆ ತಲುಪಿಸುವ ಮೂಲಕ ಅದನ್ನು ಕಾಪಾಡಬೇಕಾಗಿದೆ ಎಂದರು.

ಮೈಸೂರಿನ ಮಹಾರಾಜರು ಇಂದಿಗೂ ಕೂಡ ಟಾಂಗಾ ಸವಾರಿಯನ್ನು ಬಳಸುವುದರಿಂದ ಮೈಸೂರು ಎಂದರೆ ಟಾಂಗಾ, ಟಾಂಗಾ ಎಂದರೆ ಮೈಸೂರು ಎಂಬ ಪ್ರತೀತಿ ಇದೆ. ಮೈಸೂರಿಗೆ ಆಗಮಿಸುವಂತಹ ಪ್ರವಾಸಿಗರು ಟಾಂಗಾ ಸವಾರಿಯನ್ನು ಮಾಡದೆ ಹಿಂತಿರುಗುವುದಿಲ್ಲ, ಹಾಗಾಗಿ ಸಾಂಪ್ರದಾಯಿಕ ಉಡುಗೆ ಮತ್ತು ಟಾಂಗಾ ಸವಾರಿ ಇವೆರಡನ್ನು ಒಂದುಗೂಡಿಸಿ ಪಾರಂಪರಿಕ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಹೇಳಿದರು.

40 ಕ್ಕಿಂತ ಅಧಿಕ ಜೋಡಿಗಳು ಭಾಗಿ

ಟಾಂಗಾ ಸವಾರಿಯಲ್ಲಿ ಮೈಸೂರು, ಶಿವಮೊಗ್ಗ, ಹಾಸನ, ಬೆಂಗಳೂರು ಹಾಗೂ ಇನ್ನಿತರೆ ಜಿಲ್ಲೆಗಳಿಂದ ನೋಂದಾಯಿತ ದಂಪತಿಗಳು ಆಯಾ ಜಿಲ್ಲೆಗಳ ಸಾಂಪ್ರದಾಯಿಕ ಉಡುಗೆಯ ಮೂಲಕ ಕಣ್ಮನ ಸೆಳೆದರು.  ಕೊಡಗು, ಮೈಸೂರಿನ ಪಾರಂಪಾರಿಕ ಉಡುಗೆ ತೊಟ್ಟ ದಂಪತಿಗಳು, ಮೈಸೂರು ಪೇಠ ರೇಷ್ಮೆ ಸೀರೆ ತೊಟ್ಟ ದಂಪತಿಗಳು ಹಾಗೂ ಕಿರಿಯ ವಯಸ್ಸಿನಿಂದ ಹಿರಿಯ ವಯಸ್ಸಿನ ಜೋಡಿಗಳು ಭಾಗಿಯಾಗಿ ಜನರ ಗಮನವನ್ನು ತಮ್ಮತ್ತ ಸೆಳೆದುಕೊಂಡರು. 25 ಟಾಂಗಾ ಗಾಡಿಗಳಲ್ಲಿ ದಂಪತಿಗಳಿಗೆ ನಗರದ ಐತಿಹಾಸಿಕ ರಸ್ತೆಗಳಲ್ಲಿ ಟಾಂಗಾ ಸವಾರಿಯನ್ನು ನೋಡಿ ಜನರು ಕಣ್ತುಂಬಿ ಕೊಂಡರು.

ಸಂಪನ್ಮೂಲ ವ್ಯಕ್ತಿಯಾದ ಡಾ.ಎನ್ .ಎಸ್  ರಂಗಾರಾಜು ಮತ್ತು ಇತಿಹಾಸ ಪ್ರಾಧ್ಯಾಪಕರಾದ ಡಾ.ಲ.ನ ಸ್ವಾಮಿ ಅವರು ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿರುವ  ದಂಪತಿಗಳಿಗೆ ನಗರದ ಪ್ರಮುಖ ಪಾರಂಪರಿಕ ಕಟ್ಟಡಗಳ ಬಗ್ಗೆ ಮಾಹಿತಿ ನೀಡಿದರು.

Key words: mysore, Traditional Tonga, Ride, Rain

Font Awesome Icons

Leave a Reply

Your email address will not be published. Required fields are marked *