ಜೂನ್ 21 ರಂದು ಪತ್ರಕರ್ತ ರಮೇಶ್ ಉತ್ತಪ್ಪ ಅವರ ಯೋಗ ಕೃತಿ ಬಿಡುಗಡೆ   » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು,ಜೂನ್,19,2024 (www.justkannada.in):  ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ ‘ಯೋಗ ಸಂಗೀತ, ಮೈಸೂರು ಪರಂಪರೆ’, ಕೃತಿ ಬಿಡುಗಡೆ, ಯೋಗ ದರ್ಶಿನಿ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜೂನ್ 21 ರಂದು ಜರುಗಲಿದೆ.

ಮೈಸೂರಿನ ಓದುಗ ಪ್ರಕಾಶನ, ಮೈಸೂರು ಕಲ್ಚರಲ್ ಅಸೋಸಿಯೇಷನ್ ಹಾಗೂ ಭಾರತೀ ಯೋಗಧಾಮದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ವಿಜಯಗಿರಿ, ಉತ್ತನಹಳ್ಳಿಯ ಭಾರತೀ ಯೋಗಧಾಮದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.

ಕಾರ್ಯಕ್ರಮವನ್ನು ಭಾರತೀಯ ಯೋಗಧಾಮದ ಸಂಸ್ಥಾಪಕ ಡಾ.ಕೆ.ಎಲ್. ಶಂಕರನಾರಾಯಣ ಜೋಯ್ಸ್ ಅವರು  ಉದ್ಘಾಟಿಸಲಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ‘ಯೋಗ ಸಂಗೀತ, ಮೈಸೂರು ಪರಂಪರೆ’ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಲಕ್ಷ ವೃಕ್ಷ ಆಂದೋಲನದ ರೂವಾರಿ ಹಾಗೂ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ  ಎ.ಪಿ.ನಾಗೇಶ್, ಲೇಖಕ ಐತಿಚಂಡ ರಮೇಶ್ ಉತ್ತಪ್ಪ, ಓದುಗ ಪ್ರಕಾಶನದ ಪ್ರಕಾಶ್ ಚಿಕ್ಕಪಾಳ್ಯ ಉಪಸ್ಥಿತರಿರುತ್ತಾರೆ.

ಇಬ್ಬರು ಹಿರಿಯ ಯೋಗಪಟುಗಳಿಗೆ ಪ್ರಶಸ್ತಿ ಪ್ರದಾನ

ಕಾರ್ಯಕ್ರಮದಲ್ಲಿ ಇಬ್ಬರು ಹಿರಿಯ ಯೋಗಪಟುಗಳಾದ ಡಾ. ಪಿ.ಎನ್. ಗಣೇಶ್ ಕುಮಾರ್, ಡಾ. ಎ.ಎಸ್.ಚಂದ್ರಶೇಖರ್ ಅವರಿಗೆ ‘ದಿ ಸ್ಟಾರ್ ಆಫ್ ಯೋಗ’ ಪ್ರಶಸ್ತಿ ನೀಡಲಾಗುವುದು. ಯುವ ಪ್ರತಿಭೆಗಳಾದ ಹಾಗೂ ಯೋಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದಿರುವ ಎಚ್.ಖುಷಿ, ಅಮೂಲ್ಯ ನಾರಾಯಣ್, ಆರ್. ಅಂಕಿತ ಅವರುಗಳಿಗೆ ‘ದಿ ರೈಸಿಂಗ್ ಸ್ಟಾರ್ ಆಫ್ ಯೋಗ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.  ಎಂ.ವಿ.ಯೋಗಾಸ್ ಸಂಸ್ಥೆಯ ಅಂತಾರಾಷ್ಟ್ರೀಯ ಖ್ಯಾತಿಯ ಯೋಗಪಟುಗಳಿಂದ ‘ಯೋಗ ನೃತ್ಯ’ ಹಾಗೂ ಭಾರತೀ ಯೋಗಧಾಮದ ಯೋಗಪಟುಗಳಿಂದ ‘ಯೋಗ ದರ್ಶಿನಿ’ ಪ್ರದರ್ಶನ ನಡೆಯಲಿದೆ ಎಂದು ಮೈಸೂರು ಕಲ್ಚರಲ್ ಅಸೋಸಿಯೇಷನ್‌ ನ ಅಧ್ಯಕ್ಷ ಎ.ಪಿ.ನಾಗೇಶ್ ಹಾಗೂ ಓದುಗ ಪ್ರಕಾಶನದ ಪ್ರಕಾಶ್ ಚಿಕ್ಕಪಾಳ್ಯ ತಿಳಿಸಿದ್ದಾರೆ.

Key words: Ramesh Uthappa,  book, release, June 21

Font Awesome Icons

Leave a Reply

Your email address will not be published. Required fields are marked *