ಮಂಗಳೂರು: ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆ ಶಿಕ್ಷಕಿಯಿಂದ ಶ್ರೀರಾಮನ ಅವಹೇಳನ ಆರೋಪ ಹಿನ್ನೆಲೆ, ವಿಚಾರಣೆ ಮುಗಿಸಿ ಡಿಡಿಪಿಐ ಕಚೇರಿಯಿಂದ ಹೊರಟ ಶಿಕ್ಷಣ ಇಲಾಖೆ ಕಲಬುರಗಿ ವಲಯ ಅಪರ ಆಯುಕ್ತ ಡಾ.ಆಕಾಶ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಎರಡು ದಿನಗಳಿಂದ ಪ್ರಕರಣದ ಬಗ್ಗೆ ನಿರಂತರ ವಿಚಾರಣೆ ನಡೆಸಿ, ನಿನ್ನೆ ತಡರಾತ್ರಿಯವರೆಗೂ ಇದ್ದು ಅಧಿಕಾರಿಗಳ ಜೊತೆ ಮಾಹಿತಿ ಪಡೆದಿದ್ದಾಗಿ ತಿಳಿಸಿದ್ದಾರೆ.
ಮಾಹಿತಿ ಪಡೆದ ಬಳಿಕ ಎಲ್ಲಾ ದೂರುದಾರರು, ಮನವಿ ಕೊಟ್ಟವರಿಗೆ ವಿಚಾರಣೆಗೆ ನೊಟೀಸ್ ಮಾಡಲಾಗಿದ್ದು, ಇಂದು ಎಲ್ಲರನ್ನೂ ಕರೆಸಿ ಇಡೀ ದಿನ ಹೇಳಿಕೆ ಪಡೆಯಲಾಗಿದೆ. ಮಕ್ಕಳು ಕೂಡ ಆಗಮಿಸಿ ತಮ್ಮ ಹೇಳಿಕೆ ನೀಡಿದ್ದಾರೆ. ಜೊತೆಗೆ ಪೋಷಕರ ಹೇಳಿಕೆ, ಮನವಿ ಕೊಟ್ಟಿವರ ಹೇಳಿಕೆ ಪಡೆಯಲಾಗಿದೆ ಎಂದು ಹೇಳಿದರು.
ಜೆರೋಸಾ ಶಾಲೆಗೂ ಭೇಟಿ ನೀಡಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾಗಿ ತಿಳಿಸಿದ ಅವರು, ಬಹುತೇಕ ಎಲ್ಲರ ಹೇಳಿಕೆ ಪಡೆಯಲಾಗಿದೆ, ಬೇಕಾದ್ರೆ ಮತ್ತೆ ಕರೆಸಿ ಹೇಳಿಕೆ ಪಡೆಯುತ್ತೇನೆ, ಎರಡು ದಿನಗಳಲ್ಲಿ ವಿಚಾರಣೆ ನಡೆಸಿ ವರದಿ ಕೊಡಲು ಅಸಾಧ್ಯ, ಹಾಗಾಗಿ ಇನ್ನೂ ಸ್ವಲ್ಪ ಮಾಹಿತಿ ಕಲೆ ಹಾಕಿ ಅಂತಿಮ ವರದಿ ಸಿದ್ದಪಡಿಸ್ತೇನೆ. ವರದಿಯಲ್ಲಿ ಸತ್ಯಾಸತ್ಯತೆ ಇರಬೇಕು, ಯಾರಿಗೂ ಅನ್ಯಾಯ ಆಗಬಾರದು. ಹೀಗಾಗಿ ಸರಿಯಾಗಿ ಹೇಳಿಕೆಗಳನ್ನು ಪರಿಶೀಲನೆ ಮಾಡಿ ಅಂತಿಮ ವರದಿ ತಯಾರಿಸ್ತೇನೆ. ಆ ಬಳಿಕ ಸರ್ಕಾರಕ್ಕೆ ವರದಿ ಒಪ್ಪಿಸಲಾಗುವುದು ಎಂದು ಹೇಳಿದರು.