ಹೊಸದಿಲ್ಲಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ವಿವಾದಿತ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ವ್ಯಾಸ್ ತೆಹ್ಖಾನಾದಲ್ಲಿ ಹಿಂದೂಗಳ ಪ್ರಾರ್ಥನೆಯನ್ನು ನಿಲ್ಲಿಸಲು ಸುಪ್ರೀಂ ಕೋರ್ಟ್ ಇಂದು (ಎ.01) ನಿರಾಕರಿಸಿದೆ. ಮಸೀದಿ ಆವರಣದೊಳಗೆ ಹಿಂದೂಗಳ ಧಾರ್ಮಿಕ ಆಚರಣೆಗಳ ಮೇಲೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಆದಾಗ್ಯೂ, ಮುಸ್ಲಿಮರು ನಮಾಜ್ ಮಾಡಲು ಉತ್ತರ ಭಾಗದಿಂದ ಅಡೆತಡೆಯಿಲ್ಲದೆ ಮಸೀದಿಯನ್ನು ಪ್ರವೇಶಿಸಬಹುದು ಮತ್ತು ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟ್‌ನ ಅರ್ಚಕರು ನೆಲಮಾಳಿಗೆಯಲ್ಲಿ ಪೂಜೆ ಮಾಡಲು ದಕ್ಷಿಣದಿಂದ ಪ್ರವೇಶಿಸುತ್ತಾರೆ ಎಂದು ಪೀಠ ಹೇಳಿದೆ.
ಜ್ಞಾನವಾಪಿ ಮಸೀದಿಯ ದಕ್ಷಿಣದ ನೆಲಮಾಳಿಗೆಯಾದ ʻವ್ಯಾಸ್ ತೆಹ್ಖಾನಾ’ದೊಳಗೆ ಹಿಂದೂಗಳಿಗೆ ದೇವತೆಗಳ ಪ್ರಾರ್ಥನೆಯನ್ನು ಮಾಡಲು ವಾರಣಾಸಿ ಜಿಲ್ಲಾ ನ್ಯಾಯಾಲಯ ಅವಕಾಶ ನೀಡಿತ್ತು. ಈ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿತ್ತು. ಈ ಆದೇಶವನ್ನು ತಡೆಹಿಡಿಯುವಂತೆ ಮುಸ್ಲಿಮರು ಕೋರ್ಟ್ ಮೆಟ್ಟಿಲೇರಿದ್ದರು.
ತೆಹ್ಖಾನಾದ ಒಳಗೆ ಪೂಜೆಗೆ ಅವಕಾಶ ಕಲ್ಪಿಸುವ ಜನವರಿ 17 ಮತ್ತು ಜನವರಿ 31ರ ಆದೇಶಗಳ ನಂತರ, ಹಿಂದೂ ಪುರೋಹಿತರಿಂದ ʼಪೂಜೆ’ಯ ನಂತರ ಮುಸ್ಲಿಂ ಸಮುದಾಯ ಯಾವುದೇ ಅಡೆತಡೆಯಿಲ್ಲದೆ ಜ್ಞಾನವಾಪಿ ಮಸೀದಿಯಲ್ಲಿ ʼನಮಾಜ್’ ಸಲ್ಲಿಸಬಹುದು ಎಂಬ ಅಂಶವನ್ನು ಸುಪ್ರೀಂ ಕೋರ್ಟ್ ಹೇಳಿದೆ. ʼತೆಹ್ಖಾನಾ’ ಪ್ರದೇಶಕ್ಕೆ ಸೀಮಿತವಾಗಿ, ಮೇಲಿನ ನಿಯಮಗಳಡಿ ಪೂಜೆಗಳನ್ನು ಸಲ್ಲಿಸಲು ಎರಡೂ ಸಮುದಾಯಗಳು ಯಥಾಸ್ಥಿತಿ ಕಾಯ್ದುಕೊಳ್ಳುವುದು ಸೂಕ್ತವಾಗಿದೆ ಎಂದಿದೆ.
ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಹಿಂದೂ ಪೂಜೆಗೆ ಅನುಮತಿಯನ್ನು ವಿರೋಧಿಸಿ ಜ್ಞಾನವಾಪಿ ಮಸೀದಿ ಸಮಿತಿಯು ಮಾಡಿರುವ ಮನವಿಯನ್ನು ಸುಪ್ರೀಂ ಕೋರ್ಟ್ ಜುಲೈನಲ್ಲಿ ಅಂತಿಮ ವಿಲೇವಾರಿಗೆ ನಿಗದಿಪಡಿಸಿದೆ.