ಡೀಪ್‌ಫೇಕ್, ನಕಲಿ ಖಾತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಾರಾ ತೆಂಡೂಲ್ಕರ್

ಮುಂಬೈ: ತಂತ್ರಜ್ಞಾನ ದುರುಪಯೋಗಪಡಿಸಿಕೊಂಡು ಡೀಪ್‌ಫೇಕ್ ವಿಡಿಯೊ ಮತ್ತು ಚಿತ್ರಗಳನ್ನು ಸೃಷ್ಟಿಸುತ್ತಿರುವ ಬಗ್ಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಕಳವಳ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಇತರ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಹೆಸರಿನಲ್ಲಿ ಕ್ರಿಯೇಟ್ ಮಾಡಲಾಗಿರುವ ನಕಲಿ ಖಾತೆಗಳ ಬಗ್ಗೆ ತಮ್ಮ ಅಭಿಮಾನಿಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

‘ನಮ್ಮೆಲ್ಲರಿಗೂ ನಮ್ಮ ಸಂತೋಷ, ದುಃಖ ಮತ್ತು ದೈನಂದಿನ ಚಟುವಟಿಕೆಗಳನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮವು ಅದ್ಭುತ ಸ್ಥಳವಾಗಿದೆ. ಆದರೆ, ಇಲ್ಲಿ ತಂತ್ರಜ್ಞಾನದ ದುರುಪಯೋಗವನ್ನು ನೋಡಿ ಅತ್ಯಂತ ಬೇಸರವಾಗುತ್ತದೆ. ಇದು ಇಂಟರ್ನೆಟ್‌ನ ಸತ್ಯ ಮತ್ತು ದೃಢೀಕರಣದ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿದೆ. ನನ್ನದೇ ಕೆಲವು ಡೀಪ್‌ಫೇಕ್ ಚಿತ್ರಗಳನ್ನು ನಾನು ನೋಡಿದ್ದೇನೆ. ಎಕ್ಸ್‌ನಲ್ಲಿ ನನ್ನ ಹೆಸರಿನಲ್ಲಿ ಕೆಲವು ಖಾತೆಗಳನ್ನು ಸೃಷ್ಟಿಸಲಾಗಿದೆ. ಇದು ನನ್ನ ಫಾಲೋವರ್ಸ್‌ ಅನ್ನು ದಾರಿತಪ್ಪಿಸುವ ಕೆಲಸವಾಗಿದೆ. ನಾನು ಎಕ್ಸ್‌ನಲ್ಲಿ ಖಾತೆಯನ್ನು ಹೊಂದಿಲ್ಲ. ನನ್ನ ಹೆಸರಿನಲ್ಲಿ ಕ್ರಿಯೇಟ್ ಆಗಿರುವ ನಕಲಿ ಖಾತೆಗಳ ಬಗ್ಗೆ ಎಕ್ಸ್ ಸಂಸ್ಥೆ ಗಮನ ಹರಿಸುತ್ತದೆ ಮತ್ತು ಅವುಗಳನ್ನು ರದ್ದು ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಸಾರಾ ಬರೆದುಕೊಂಡಿದ್ದಾರೆ.

ಅಲ್ಲದೆ, ನಕಲಿ ಖಾತೆ ಸೃಷ್ಟಿಕರ್ತರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೂ ಅವರು ಒತ್ತಾಯಿಸಿದ್ದಾರೆ. ‘ಸತ್ಯವನ್ನು ಬದಿಗೊತ್ತಿ ಮನರಂಜನೆ ಇರಬಾರದು. ನಂಬಿಕೆ ಮತ್ತು ವಾಸ್ತವದ ಆಧಾರದ ಮೇಲೆ ಸಂವಹನವನ್ನು ಪ್ರೋತ್ಸಾಹಿಸೋಣ’ ಎಂದು ಸಾರಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *