ತಮ್ಮ ವಿರುದ್ದ ಏಕವಚನದಲ್ಲಿ ಮಾತನಾಡಿದ ಜನಾರ್ದನ ರೆಡ್ಡಿಗೆ ನೇರಾ ನೇರಾ ಎಚ್ಚರಿಕೆ ಕೊಟ್ಟ ಸಿಎಂ ಸಿದ್ದರಾಮಯ್ಯ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಸಂಡೂರು ನವೆಂಬರ್, 9,2024 (www.justkannada.in):  ಜನಾರ್ದನರೆಡ್ಡಿ ಒಬ್ಬ ಜುಜುಬಿ ರಾಜಕಾರಣಿ. ಎಷ್ಟು ವರ್ಷ ಜೈಲಿಗೆ ಹೋಗಿ ಬಂದಿದೀರಿ. ನಿಮ್ಮ ಅಟ್ಟಹಾಸ ಮುರಿದದ್ದು, ಬಳ್ಳಾರಿ ಜಿಲ್ಲೆಯ ಮಹಾ ಜನತೆಯನ್ನು ಭಯಮುಕ್ತ ಗೊಳಿಸಿದ್ದು ಇದೇ ಸಿದ್ದರಾಮಯ್ಯ ಅನ್ನೋದನ್ನು ಮರೀಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರಾ ನೇರಾ ಬಹಿರಂಗವಾಗಿ ಎಚ್ಚರಿಕೆ ನೀಡಿದರು.

ಸಂಡೂರಿನ ವಿಠಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್ ಅವರ ಪರವಾಗಿ ಪ್ರಚಾರ ಸಭೆಯಲ್ಲಿ, ತಮ್ಮ ವಿರುದ್ಧ ಏಕವಚನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ಜನಾರ್ದನರೆಡ್ಡಿಯವರಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.

ರೆಡ್ಡಿಯವರೇ, ಕರ್ನಾಟಕ ರಾಜ್ಯ ರಾಜಕಾರಣಕ್ಕೆ ನನ್ನ ಕೊಡುಗೆ ಏನು ? ನಿಮ್ಮ ಕೊಡುಗೆ ಏನು? ನೀವೇನು ಬಳ್ಳಾರಿ ಯಜಮಾನರಾ? ಮತ ಹಾಕುವ ಬಳ್ಳಾರಿಯ ಜನ, ಸಂಡೂರಿನ ಜನ ನಮ್ಮ ಯಜಮಾನರು. ನೆನಪಿರಲಿ. ನಾನು ಗಂಗಾವತಿಗೆ ಪ್ರಚಾರಕ್ಕೆ ಹೋಗಲು ಆಗಲಿಲ್ಲ, ನಮ್ಮ ಕಾಂಗ್ರೆಸ್ ಅಭ್ಯರ್ಥಿ ಸರಿಯಾದ  ಪ್ರಚಾರ ಮಾಡಲಿಲ್ಲ ಹೀಗಾಗಿ ನೀವು ಗೆದ್ರಿ. ನಿಮ್ಮ ಈ ಗೆಲುವು ಶಾಶ್ವತ ಅಲ್ಲ. ಯಾರ ಗೆಲುವೂ ಶಾಶ್ವತ ಅಲ್ಲ. ನೆನಪಿರಲಿ. ನನ್ನ ಬಗ್ಗೆ ಏಕ ವಚನದಲ್ಲಿ ಮಾತನಾಡುವ ಯೋಗ್ಯತೆ ನಿಮಗಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಬಳ್ಳಾರಿಯಲ್ಲಿ ಪ್ರಜಾಪ್ರಭುತ್ವ ಇರಬಾರದಾ? ನಮ್ಮ ಸರ್ಕಾರ ಇದೆ. ಯಡಿಯೂರಪ್ಪ ಅವರು, ನೀವು ಮಾತನಾಡುತ್ತಿಲ್ಲವಾ ? ನಿಮ್ಮ ಸರ್ಕಾರ ಇದ್ದಾಗ ನನಗೆ ಬಳ್ಳಾರಿಯಲ್ಲಿ ಮಾತನಾಡಲು ಜಾಗ ಕೊಟ್ಟಿರಲಿಲ್ಲ. ನನಗೆ ಕುಡಿಯೋದಕ್ಕೆ ನೀರು ಕೇಳಿದ್ರೂ ಜನ ನೀರು ಕೊಡೋಕೂ ಭಯ ಪಡ್ತಾ ಇದ್ರು. ನಮ್ಮ ಯಜಮಾನರಾದ ಬಳ್ಳಾರಿ ಜನರನ್ನು ಇಷ್ಟು ಭಯದಲ್ಲಿ ಇಟ್ಟಿದ್ರಲ್ಲಾ , ಯಾವ ಮುಖ ಹೊತ್ತುಕೊಂಡು ಇದೇ ಜನರ ಬಳಿ ಮತ ಕೇಳಲು ಬಂದಿದ್ದೀರಿ? ನಾಚಿಕೆ ಆಗೋದಿಲ್ವಾ ನಿಮಗೆ ಎಂದು ಖಾರವಾಗಿ ಪ್ರಶ್ನಿಸಿದರು.

ಬಡವರ ಪಾಲಿನ ಪಾಂಡುರಂಗ ಮುಖ್ಯಮಂತ್ರಿ ಸಿದ್ದರಾಮಯ್ಯ- ಸಚಿವ ಸಂತೋಷ್ ಲಾಡ್

ಸಚಿವ ಸಂತೋಷ್ ಲಾಡ್ ಮಾತನಾಡಿ, ಬಡವರ ಪಾಲಿನ ಪಾಂಡುರಂಗ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವತ್ತು ಇಂದಿರಾಗಾಂಧಿ- ಇವತ್ತು ಸಿದ್ದರಾಮಯ್ಯ ಅವರು ಕೊಟ್ಟ ಕಾರ್ಯಕ್ರಮಗಳನ್ನು ಬಿಟ್ಟರೆ ಬಿಜೆಪಿಯ ಯಾವ ಕಾರ್ಯಕ್ರಮ ರಾಜ್ಯದಲ್ಲಿದೆ? TB ಡ್ಯಾಂನಿಂದ ಸಂಡೂರಿನ 136 ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸಿದ ಭಗೀರತ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ. ಜನಾರ್ದನರೆಡ್ಡಿಯವರೇ ನಿಮಗೆ ದೇವರು ನಾಲಗೆ ಕೊಟ್ಟಿದ್ದಾನೆ ಅಂತ ಸಿದ್ದರಾಮಯ್ಯ ಅವರ ವಯಸ್ಸಿಗೆ, ಘನತೆಗೂ, ಚರಿತ್ರೆಗೂ ಬೆಲೆ ಕೊಡದೆ ವೈಯುಕ್ತಿಕವಾಗಿ ಏಕವಚನದಲ್ಲಿ  ಮಾತನಾಡಬೇಡಿ. ಯಡಿಯೂರಪ್ಪ ಅವರಿಗೂ ಹೀಗೇ ಏಕ ವಚನದಲ್ಲಿ ಮಾತನಾಡಿದ್ರಿ. ಇದರಿಂದ ನಿಮಗೆ ಖುಷಿ ಸಿಗಬಹುದು. ಆದರೆ ಒಳ್ಳೇದಾಗಲ್ಲ. ಇಂಥಾ ಜನಾರ್ದನರೆಡ್ಡಿಗೆ ಸರಿಯಾದ ಪಾಠ ಕಲಿಸಿ ಕಾಂಗ್ರೆಸ್ಸಿನ ಅನ್ನಪೂರ್ಣಮ್ಮ ಅವರನ್ನು ಗೆಲ್ಲಿಸಿ ಎಂದರು.

Key words: CM Siddaramaiah, warned, Janardhana Reddy

Font Awesome Icons

Leave a Reply

Your email address will not be published. Required fields are marked *