ಧರ್ಮಸ್ಥಳ: ತರಗತಿ ಮತ್ತು ಸುದ್ದಿ ಮಾಧ್ಯಮದ ನಡುವೆ ನೇರ ಸಂಬಂಧ ಬೆಸೆಯುವ ಉದ್ದೇಶದೊಂದಿಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ಹಾಗು ಬೀ.ವೊಕ್ ಜಂಟಿಯಾಗಿ ಆಯೋಜಿಸಿದ್ದ ‘ಮಾಧ್ಯಮ, ಸಂಸ್ಕೃತಿ ಮತ್ತು ತಂತ್ರಜ್ಞಾನ : ಮ್ಯಾಪಿಂಗ್ ಸೋಶಿಯೊ ಪೊಲಿಟಿಕಲ್ ಆರ್ಕಿಟೆಕ್ಚರ್‘ ಹೆಸರಿನ ಎರಡು ದಿನದ ಸಮಾವೇಶದ ಉದ್ಘಾಟನೆ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಉದ್ಘಾಟಕರಾಗಿ ಆಗಮಿಸಿದ ಸುವರ್ಣ ನ್ನೂಸ್ ಸಂಪಾದಕ ಹಾಗು ಹೆಸರಾಂತ ನಿರೂಪಕ ಅಜಿತ್ ಹನಮಕ್ಕನವರ್, ಯಶಸ್ವಿ ಪತ್ರಕರ್ತ ಹೊಸದನ್ನು ಅರ್ಥೈಸಿಕೊಂಡು ತಕ್ಕ ಪ್ರತಿಕ್ರಿಯೆ ಕೊಡುವ ಸಾಮರ್ಥ್ಯ ಹೊಂದಿರಬೇಕು ಎಂದರು. ಕೃತಕ ಬುದ್ಧಿಮತ್ತೆಯ ಬಗ್ಗೆ ಮಾತನಾಡುತ್ತ ಅವರು, ತಂತ್ರಜ್ಞಾನವು ಮಾನವನ ಜಾಗವನ್ನು ಆಕ್ರಮಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಕೊಪ್ಪಳ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೋ.ಬೀ.ಕೆ.ರವಿ ಮಾತನಾಡಿ, ಕೆಲಸದಲ್ಲಿ ಆಸಕ್ತಿ, ಉತ್ಸಾಹ ಮತ್ತು ಸಮರ್ಪಣೆ ಅತ್ಯಗತ್ಯ ಎಂದರು. ಮುಖ್ಯ ಅತಿಥಿಗಳಾದ ಡಾ.ಸತೀಶ್ ಚಂದ್ರ ಮಾಧ್ಯಮವನ್ನು ಜನ ಹಾಗು ಸರ್ಕಾರದ ನಡುವಿನ ಮಧ್ಯವರ್ತಿ ಎಂದು ವರ್ಣಿಸಿದರು.
ಈ ಸಂದರ್ಭದಲ್ಲಿ ಪ್ರೊ. ಬೀ.ಕೆ. ರವಿ, ಅಸ್ಸಾಂ ಕೇಂದ್ರೀಯ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಪ್ರೊ. ಕೆ.ವಿ. ನಾಗರಾಜ್, ಕಾಲೇಜಿನ ಸ್ನಾತ್ತಕೋತ್ತರ ವಿದ್ಯಾರ್ಥಿ ಶ್ಯಾಮ್ ಪ್ರಸಾದ್, ಸೋಮೇಶ್ವರ ಗುರುಮಠರನ್ನು ಸನ್ಮಾನಿಸಲಾಯಿತು. ಸುದ್ದಿ ಸಂಪಾದಕ ನಿಖಿಲ್ ಜೋಶಿ, ಸುವರ್ಣದ ವೆಬ್ ಸಂಪಾದಕ ರಾಘವ್ ಶರ್ಮಾ, ಬೆಳ್ತಂಗಡಿಯ ಮಾಧ್ಯಮ ತಂಡ, ಅನ್ಯ ಕಾಲೇಜುಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎರಡು ದಿನಗಳ ಸಮಾವೇಶದಲ್ಲಿ ಭಾಗವಹಿಸಲು ಸುಮಾರು 25 ಕಾಲೇಜುಗಳ ವಿದ್ಯಾರ್ಥಿಗಳು ಬಂದಿದ್ದು, 45ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ ಪ್ರಸ್ತುತಿಗಳು ನಡೆಯಲಿವೆ.