ಆಂಧ್ರಪ್ರದೇಶ: ಕಲಿಯುಗದ ವೈಕುಂಠ, ತಿರುಪತಿ ತಿಮ್ಮಪ್ಪ ದೇವಸ್ಥಾನದ ಲಡ್ಡು ಮೇಲೆಯೇ ಅಪವಾದ ಬಂದಿದೆ. ಆ ಅಪವಾದ, ಅಪಚಾರದಿಂದ ಮುಕ್ತವಾಗಲು ದೇವಸ್ಥಾನದಲ್ಲಿ ವಿವಿಧ ಯಾಗ-ಯಜ್ಞಗಳನ್ನು ಪುರೋಹಿತರು ಮಾಡಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯಿಂದ ಸತತ 4 ಗಂಟೆಗಳ ಕಾಲ ಯಾಗ ಹಾಗೂ ಪಂಚಗವ್ಯ ಪ್ರೋಕ್ಷಣೆ ಮೂಲಕ ದೇಗುಲದ ಶುದ್ಧೀಕರಣ ಮಾಡಿದ್ದಾರೆ.
ಕೋಟಿ ಕೋಟಿ ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಿಸಿ ಆರಾಧಿಸಿ ಆ ತಿಮ್ಮಪ್ಪನ ಪ್ರಸಾದವೆಂದು ಸ್ವೀಕರಿಸುವ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ ವಿಚಾರ ವ್ಯಾಪಕ ಚರ್ಚೆ, ಆಕ್ರೋಶಕ್ಕೆ ಕಾರಣವಾಗಿದೆ. ಇಂದು ದೇವಸ್ಥಾನದಲ್ಲಿ ಟಿಟಿಡಿ ವತಿಯಿಂದ ಮಹಾಶಾಂತಿ ಹೋಮ ಮಾಡಲಾಗಿದೆ. ಆಂಧ್ರಪ್ರದೇಶದ ವಿವಿಧ ಪುರೋಹಿತರು ಈ ಮಹಾಶಾಂತಿ ಯಾಗ ನಡೆಸಿದ ಬಳಿಕ ಪಂಚಗವ್ಯವವನ್ನು ಸಂಪ್ರೋಕ್ಷಿಸಿ ದೇವಸ್ಥಾನದ ಶುದ್ಧೀಕರಣ ಮಾಡಿದ್ದಾರೆ.
ಆಗಮ ಶಾಸ್ತ್ರಜ್ಞರ ಸಲಹೆ ಮೇರೆಗೆ ಈ ಶಾಂತಿ ಹೋಮವನ್ನು ಇಂದು ಬೆಳಗ್ಗೆ 6 ರಿಂದ 10 ಗಂಟೆವರೆಗೆ ದೇವಾಲಯದ ಬಳಿ ಇರುವ ಬಂಗಾರ ಬಾವಿ ಯಾಗ ಶಾಲೆಯಲ್ಲಿ ನೆರವೇರಿಸಲಾಗಿದೆ. ವಾಸ್ತು ಕುಂಡ, ಸಭ್ಯಂ ಹೋಮ ಕುಂಡ, ಪೌಣರಿಕಂ ಹೋಮ ಕುಂಡ ಎಂಬ 3 ಹೋಮ ಕುಂಡಗಳನ್ನು ರಚಿಸಿ ದೇವಾಲಯದ ಮುಖ್ಯ ಅರ್ಚಕರು ಯಾಗ ನಡೆಸಿದ್ದಾರೆ.
ಹಸುವಿನ ತುಪ್ಪವನ್ನು ಮಂತ್ರ ಹೇಳೋ ಮೂಲಕ ಹೋಮಕುಂಡದಲ್ಲಿ ಹಾಕಿದರು. ಬಳಿಕ ಪಂಚಗವ್ಯವನ್ನು ಗರ್ಭಗುಡಿ, ಲಡ್ಡು ಹಾಗೂ ಅನ್ನ ಪ್ರಸಾದ ತಯಾರಿ ಜಾಗ ಸೇರಿ ತುಪ್ಪ ಬಳಸುವ ದೇಗುಲದ ಎಲ್ಲ ಕಡೆ ಅರ್ಚಕರು ಸಂಪ್ರೋಕ್ಷಣೆ ಮಾಡಿದ್ರು. ಬಳಿಕ ದೇಗುಲದ ಸುತ್ತ ದರ್ಬೆ ಪಂಜಿನಿಂದ ಮೆರವಣಿಗೆ ಮಾಡಿ ಗಂಗಾಜಲದಿಂದ ಶುದ್ಧೀಕರಣ ಮಾಡಿದ್ದಾರೆ. ನಂತರ ದೇವಸ್ಥಾನಕ್ಕೆ ದೃಷ್ಟಿ ತೆಗೆದು ದೃಷ್ಟಿ ದೋಷ ಪೂಜೆ ಮಾಡುವ ಮೂಲಕ ಶುದ್ಧೀಕರಣ ಕಾರ್ಯವನ್ನು ಸಂಪನ್ನಗೊಳಿಸಿದ್ದಾರೆ.
ಬೆಳಗ್ಗೆ ದೇವಸ್ಥಾನದ ಶುದ್ಧೀಕರಣ ನಡೆದರೆ ಸಂಜೆಯಾಗುತ್ತಲೇ ತಿಮ್ಮಪ್ಪನ ದೇಗುಲದಲ್ಲಿ ಹೈಡ್ರಾಮಾ ನಡೆದಿದೆ. ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಮಾಜಿ ಅಧ್ಯಕ್ಷ ಭೂಮಲ ಕರುಣಾಕರರೆಡ್ಡಿ ಅವರು ಇಂದು ತಿರುಮಲಕ್ಕೆ ಬಂದು ಕಲ್ಯಾಣಿಯಲ್ಲಿ ಮುಳುಗಿ ಬಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದ್ದಾರೆ. ದೇವರ ಪ್ರಸಾದದಲ್ಲಿ ನಾನು ಏನಾದರೂ ತಪ್ಪು ಮಾಡಿದ್ದರೆ, ನನ್ನ, ನನ್ನ ಕುಟುಂಬದ ಜೀವವೇ ಹೋಗಲಿ ಎಂದು ಪ್ರಮಾಣ ಮಾಡಿದ್ದಾರೆ.
https://x.com/YSRCParty/status/1838185384884486440?