ದಾವೋಸ್(ಸ್ವಿಟ್ಜರ್ಲೆಂಡ್): ತೆಲಂಗಾಣದಲ್ಲಿ ಹೂಡಿಕೆ ಮಾಡಲು ಮುಂದಾಗಿರುವ ಅದಾನಿ ಸಮೂಹ ವಿಶ್ವ ಆರ್ಥಿಕ ವೇದಿಕೆ ೨೦೨೪ರಲ್ಲಿ ₹೧೨ ಸಾವಿರ ಕೋಟಿ ಒಪ್ಪಂದ ಮಾಡಿಕೊಂಡಿದೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆಮಾಡಿದ ಅದಾನಿ ಸಮೂಹ, ತೆಲಂಗಾಣ ಸಿ.ಎಂ ರೇವಂತ್ ರೆಡ್ಡಿ ಹಾಗು ಅದಾನಿ ಗ್ರೂಪ್ಸ್ ನ ಅಧ್ಯಕ್ಷ ಗೌತಮ್ ಅದಾನಿ ಸಮ್ಮುಖದಲ್ಲಿ ನಡೆದ ಈ ಒಪ್ಪಂದದಲ್ಲಿ ಹಸಿರು ಇಂಧನ, ಸುಸ್ಥಿರ ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದಿದೆ.
ಇದರ ಭಾಗವಾಗಿ ಮುಂದಿನ ೫-೭ ವರ್ಷಗಳಲ್ಲಿ ₹೫ ಸಾವಿರ ಕೋಟಿ ವೆಚ್ಚದಲ್ಲಿ ೧೦೦ ಮೆಗಾ ವ್ಯಾಟ್ ಸಾಮರ್ಥಯದ ಮಾಹಿತಿ ಕೇಂದ್ರವನ್ನು ಸ್ತಾಪಿಸಲಾಗುತ್ತದೆ. ಇದರಲ್ಲಿ ಸ್ಥಳೀಯ ಮಟ್ಟದ ಮಧ್ಯಮ, ಸಣ್ಣ, ಅತಿಸಣ್ಣ ಕೈಗಾರಿಕೆಗಳೊಂದಿಗೆ ಹಾಗು ಸ್ಟಾರ್ಟಪ್ ಗಳೊಂದಿಗೆ ಕೆಲಸ ಮಾಡಲಿದ್ದು, ೬೦೦ ಜನರಿಗೆ ನೇರ ನೌಕರಿ ಸಿಗಲಿದೆ ಎನ್ನಲಾಗಿದೆ.
ಅದಾನಿ ಎನರ್ಜಿ ಇಂಧನ ಕ್ಷೇತ್ರದಲ್ಲಿ ₹೫ ಸಾವಿರ ಕೋಟಿ, ಅಂಬುಜಾ ಸಿಮೆಂಟ್ ತಯಾರಿಕೆಗೆ ₹೧೪೦೦ ಕೋಟಿ ಹೂಡಿಕೆ ಮಾಡಲಿದ್ದು, ವರ್ಷಕ್ಕೆ ೬೦ ಲಕ್ಷ ಟನ್ ಸಿಮೆಂಟ್ ಉತ್ಪಾದನೆಯ ಗುರಿಯಿದೆ. ಇದರಿಂದ ಸುಮಾರು ೪ ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕಂಪೆನಿ ಹೇಳಿದೆ.
ಇದರ ಜೊತೆಗೆ ಡ್ರೋನ್ ಮತ್ತು ಕ್ಷಿಪಣಿ ವ್ಯವಸ್ಥೆ ಸಂಶೋಧನೆ, ಅಭಿವೃದ್ಧಿ ಹಾಗು ವಿನ್ಯಾಸ ಘಟಕವನ್ನು ₹೧ ಸಾವಿರ ಕೋಟಿ ಖರ್ಚಿನಲ್ಲಿ ಸ್ಥಾಪಿಸುವ ಪ್ರಸ್ತಾವನೆಯೊಂದಿಗೆ ಹಲವು ಒಪ್ಪಂದಗಳಾಗಿವೆ.